
ಕಾರ್ಕಳ : “ಪರಿಸರವೇ ನಮ್ಮ ಗುರು, ಪರಿಸರದಿಂದ ನಮಗೆ ತುಂಬಾ ಕಲಿಯಲಿಕ್ಕಿದೆ. ವಿದ್ಯಾರ್ಥಿಗಳು ಪರಿಸರದಲ್ಲಿ ಕಂಡುಬರುವ ಸಸ್ಯಗಳು, ಜೀವಿಗಳು, ಪ್ರಾಣಿಗಳ ಅಧ್ಯಯನ ಮಾಡಬೇಕು. ಪರಿಸರದ ಹಲವಾರು ಸಸ್ಯಗಳು ಮಾನವನ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಹಿತ್ತಲಗಿಡ ಮದ್ದಲ್ಲ ಎಂಬ ಮಾತಿನಂತೆ ನಮ್ಮ ಮನೆಯ ಸುತ್ತಲೂ ಬೆಳೆಯುವ ಕೆಲವು ಔಷಧೀಯ ಗುಣಗಳಿರುವ ಸಸ್ಯಗಳನ್ನು ನಿರ್ಲಕ್ಷ ಮಾಡುತ್ತೇವೆ. ಆದರೆ ಕೆಲವೊಂದು ರೋಗಗಳಿಗೆ ಈ ಸಸ್ಯಗಳು ಅತ್ಯಂತ ಅವಶ್ಯಕವಾದದ್ದು” ಎಂದು ಸಂಪನ್ಮೂಲ ವ್ಯಕ್ತಿಗಳಾದ ಡಾ ರಶ್ಮಿ ಕೆ ಇವರು ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ‘ಇಕೋ ಕ್ಲಬ್’ ಅನ್ನು ಉದ್ಘಾಟಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳಿಗೆ ಹಲವಾರು ಜಲಸಸ್ಯಗಳನ್ನು ತೋರಿಸಿ ಅವುಗಳ ಅವಶ್ಯಕತೆಗಳ ಬಗ್ಗೆ ವಿವರಿಸಿದರು. ನಂತರ ಎಲ್ಲಾ ವಿದ್ಯಾರ್ಥಿಗಳಿಗೆ ಕಾರ್ಯಗಾರವನ್ನು ನಡೆಸಿದರು.
ವಿದ್ಯಾರ್ಥಿಗಳು ಪರಿಸರದ ಬೇರೆ ಬೇರೆ ಕಲಾಕೃತಿಗಳನ್ನು ರಚಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃಷ್ಣರಾವ್ ರವರು ಮಾತನಾಡುತ್ತಾ “ಇಂದು ಆಯುರ್ವೇದಿಕ್ ಔಷಧಗಳಿಗೆ ತುಂಬಾ ಬೇಡಿಕೆಯಿದೆ. ಔಷಧೀಯ ಗುಣಗಳಿರುವ ಸಸ್ಯಗಳನ್ನು ಗುರುತಿಸಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ” ಎಂದರು. ಇಕೋ ಕ್ಲಬ್ ವತಿಯಿಂದ ನಡೆಸಲಾದ ಬೇರೆ ಬೇರೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು.
ಪ್ರೌಢಶಾಲಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಶ್ರೀಮತಿ ಪಾಟ್ಕರ್ ಮಾತನಾಡಿ “ವಿದ್ಯಾರ್ಥಿಗಳು ಪರಿಸರವನ್ನು ಶುಚಿಯಾಗಿಡುವ ಮತ್ತು ಪರಿಸರವನ್ನು ರಕ್ಷಿಸುವ ಕೆಲಸಮಾಡಬೇಕು” ಎಂದರು.
ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಲೊಲಿಟಾ ಡಿಸಿಲ್ವಾ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಕೋ ಕ್ಲಬ್ ನ ಪ್ರಧಾನ ಸಂಯೋಜಕರಾದ ಉಪನ್ಯಾಸಕ ಗುರುಕುಮಾರ್ , ಪ್ರೌಢಶಾಲಾ ವಿಭಾಗದ ಶಿಕ್ಷಕಿ ಶ್ರುತಿ, ಪ್ರಾಥಮಿಕ ವಿಭಾಗದ ಶಿಕ್ಷಕಿ ಮಹಿಮಾ ಕಾರ್ಯಕ್ರಮವನ್ನು ಸಂಯೋಜಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕುಮಾರಿ ದೀಕ್ಷಾರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.