
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಹೆಚ್ಚುವರಿ ಹಾಸಿಗೆ (Mattress), ತಲೆದಿಂಬು (Pillow) ಸೇರಿದಂತೆ ಇತರ ಸೌಲಭ್ಯಗಳನ್ನು ನೀಡದಿರುವ ಕುರಿತ ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ 57ನೇ ಸಿವಿಲ್ ಕೋರ್ಟ್ ನಡೆಸಿದೆ.
ಕೋರ್ಟ್ ಆದೇಶ ಉಲ್ಲಂಘನೆ ಆರೋಪ:
ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ಕೋರ್ಟ್ ಈ ಹಿಂದೆ ಆದೇಶ ನೀಡಿದ್ದರೂ ಜೈಲಾಧಿಕಾರಿಗಳು ಉದ್ದೇಶಪೂರ್ವಕವಾಗಿ ಯಾವುದೇ ಸವಲತ್ತುಗಳನ್ನು ದರ್ಶನ್ ಅವರಿಗೆ ಒದಗಿಸಿಲ್ಲ. ಇದು ಕೋರ್ಟ್ ಆದೇಶದ ಉಲ್ಲಂಘನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ದರ್ಶನ್ ಅವರು ಬೆನ್ನುನೋವಿನಿಂದ (Back Pain) ಬಳಲುತ್ತಿದ್ದರೂ ಸಹ ಮಾನವೀಯ ನೆಲೆಯಲ್ಲಿ ಅವರಿಗೆ ಹೆಚ್ಚುವರಿ ಹಾಸಿಗೆ ನೀಡಲು ಜೈಲಾಧಿಕಾರಿಗಳು ನಿರಾಕರಿಸಿದ್ದಾರೆ. ಇದು ನೋವುಂಟು ಮಾಡುವ ವಿಚಾರ ಎಂದು ವಕೀಲರು ವಾದ ಮಂಡಿಸಿದ್ದಾರೆ.
ರೇಪಿಸ್ಟ್ ಉಮೇಶ್ ರೆಡ್ಡಿ ಉದಾಹರಣೆ:
ವಾದದ ವೇಳೆ, ದರ್ಶನ್ ಪರ ವಕೀಲರು ಕುಖ್ಯಾತ ರೇಪಿಸ್ಟ್ ಉಮೇಶ್ ರೆಡ್ಡಿಗೆ ಜೈಲಿನಲ್ಲಿ ಕಲರ್ ಟಿವಿ ಸೌಲಭ್ಯ ನೀಡಲಾಗಿದೆ. ಆದರೆ ದರ್ಶನ್‌ಗೆ ಬೆನ್ನುನೋವಿಗೆ ಅಗತ್ಯವಿರುವ ಕನಿಷ್ಠ ಸವಲತ್ತುಗಳನ್ನೂ ನೀಡುತ್ತಿಲ್ಲ ಎಂದು ಉದಾಹರಣೆ ಸಮೇತ ಕೋರ್ಟ್‌ನ ಗಮನಕ್ಕೆ ತಂದರು.
ನ್ಯಾಯಾಲಯದ ಆದೇಶವನ್ನು ಪಾಲಿಸದಿರುವ ಜೈಲಾಧಿಕಾರಿಗಳ ಕ್ರಮವನ್ನು ಪ್ರಶ್ನಿಸಿರುವ ಈ ಅರ್ಜಿಯ ವಿಚಾರಣೆಯ ಆದೇಶವನ್ನು ಗೌರವಾನ್ವಿತ 57ನೇ ಸಿವಿಲ್ ಕೋರ್ಟ್ ಅಕ್ಟೋಬರ್ 9 ರಂದು ಪ್ರಕಟಿಸುವುದಾಗಿ ಕಾಯ್ದಿರಿಸಿದೆ.