
ಉಡುಪಿ : ಕಾಂಗ್ರೆಸ್ ಪಕ್ಷದ ಪ್ರತಿಭಟನಾ ಸಭೆಯಲ್ಲಿ ಉಡುಪಿ ಶಾಸಕರ ವಿರುದ್ಧ ಅಸಂಬದ್ಧ ಹೇಳಿಕೆ ನೀಡುತ್ತಾ ಶಾಸಕರ ಮನೆಗೆ, ಕಛೇರಿಗೆ ಮುತ್ತಿಗೆ ಹಾಕುತ್ತೇನೆ ಎಂಬ ಬಾಲಿಶ ಹೇಳಿಕೆ ನೀಡುತ್ತಿರುವ, ತನ್ನದೇ ಕಾಂಗ್ರೆಸ್ ಪಕ್ಷದಲ್ಲಿ ಮೂಲೆಗುಂಪಾಗಿರುವ ಪ್ರಸಾದ್ ಕಾಂಚನ್ ಗೆ ಸದಾ ಕ್ಷೇತ್ರದ ಅಭಿವೃದ್ಧಿಯ ಕನಸನ್ನು ಹೊತ್ತು ಸಾರ್ಥಕ ಸೇವೆಗೈಯುತ್ತಿರುವ ಉಡುಪಿ ಶಾಸಕರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಸಾದ್ ಕಾಂಚನ್ ರನ್ನು ಉಡುಪಿಯ ಜನತೆ ಹೀನಾಯವಾಗಿ ಸೋಲಿಸಿ ಮನೆಗೆ ಕಳುಹಿಸಿದರೂ ಆ ಸೋಲಿನ ಹತಾಶೆಯಿಂದ ಇನ್ನೂ ಹೊರಬರಲಾಗದ ಪ್ರಸಾದ್ ಕಾಂಚನ್ ಕೇವಲ ತನ್ನ ನಾಯಕರನ್ನು ಖುಷಿಪಡಿಸುವ ಉದ್ದೇಶದಿಂದ ಶಾಸಕರನ್ನು ಟೀಕಿಸುವುದನ್ನೇ ದಿನಚರಿ ಮಾಡಿಕೊಂಡಿರುವುದು ವಿಷಾದನೀಯ.
ತಾಯಿ ಸರಳಾ ಕಾಂಚನ್ ಜಿಲ್ಲಾ ಪರಿಷತ್ ಸದಸ್ಯೆಯಾಗಿದ್ದರೂ ಅವರ ಪುತ್ರರಾಗಿ ಒಂದು ಬಾರಿಯೂ ಜನಪ್ರತಿನಿಧಿಯಾಗಿ ಸೇವೆ ಮಾಡಿದ ಅನುಭವವೇ ಇಲ್ಲದ ಪ್ರಸಾದ್ ಕಾಂಚನ್ ಗೆ ಜನಪ್ರತಿನಿಧಿಯಾಗಿರುವ ಶಾಸಕರನ್ನು ಏಕ ವಚನದಲ್ಲಿ ಟೀಕಿಸಬಾರದು ಎಂಬ ಕನಿಷ್ಠ ಜ್ಞಾನ ಇಲ್ಲದೇ ಇರುವುದು ದುರ್ದೈವದ ಸಂಗತಿಯಾಗಿದೆ. ಇಂತಹ ಕ್ಷುಲ್ಲಕ ಹೇಳಿಕೆಗಳನ್ನು ನೀಡಿ ನಗೆಪಾಟಲಿಗೀಡಾಗುತ್ತಿರುವ ಪ್ರಸಾದ್ ಕಾಂಚನ್ ಗೆ ಅವರ ತಾಯಿಯೇ ಸ್ವಲ್ಪ ಬುದ್ಧಿ ಹೇಳುವುದು ಉತ್ತಮ ಎಂದು ಅವರು ತಿಳಿಸಿದ್ದಾರೆ.
ನಿಟ್ಟೂರು ಪ್ರದೇಶದಲ್ಲಿ ರಾಜ ಕಾಲುವೆಯನ್ನು ಒತ್ತುವರಿ ಮಾಡಿ, ನಗರಸಭೆಯ ನಿಯಮಾವಳಿಯನ್ನು ಮೀರಿ ನಿರ್ಮಿಸಿರುವ ತಮ್ಮ ವ್ಯವಹಾರದ ಕಛೇರಿಯ ಅಕ್ರಮ ಕಟ್ಟಡವನ್ನು ತಾವೇ ತಕ್ಷಣ ತೆರವು ಮಾಡಿ ಪ್ರಸಾದ್ ಕಾಂಚನ್ ಇತರರಿಗೆ ಮಾದರಿಯಾಗಲಿ ಎಂದು ಪ್ರಭಾಕರ ಪೂಜಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.