
ಉಡುಪಿ ಜಿಲ್ಲಾಡಳಿತದ ಕಠಿಣ ನಿಯಮಾವಳಿಯಿಂದ ತುಳುನಾಡಿನ ಪರಂಪರಾಗತ ಧಾರ್ಮಿಕ ಆಚರಣೆಗಳಿಗೆ ಅಡಚಣೆ ಉಂಟಾಗುತ್ತಿದೆ ಎಂಬ ಕಾರಣದಿಂದ, ಈ ನಿಯಮಾವಳಿಯನ್ನು ಪುನರ್‌ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಭಕ್ತ ಸಮುದಾಯ ಮನವಿ ಸಲ್ಲಿಸಿದೆ.
ತುಳುನಾಡಿನಲ್ಲಿ ಹಿಂದಿನಿಂದಲೂ ಕೋಳಿ ಅಂಕ, ಯಕ್ಷಗಾನ, ನೇಮೋತ್ಸವ, ನಾಗಮಂಡಲ ಹಾಗೂ ಇತರ ಧಾರ್ಮಿಕ ಆಚರಣೆಗಳು ಮಹತ್ವ ಪಡೆದಿವೆ. ಜಿಲ್ಲಾಡಳಿತದ ಹೊಸ ನಿಯಮಗಳು ಈ ಸಂಸ್ಕೃತಿಯ ಆಚರಣೆಗೆ ಅಡ್ಡಿಯಾಗುತ್ತಿವೆ ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ತುಳುನಾಡಿನ ಪರಂಪರೆಗೆ ಅನುಗುಣವಾಗಿ ಧಾರ್ಮಿಕ ಆಚರಣೆಗಳಿಗೆ ಅವಕಾಶ ಕಲ್ಪಿಸಬೇಕು ಎಂಬುದಾಗಿ ಮನವಿಯಲ್ಲಿ ತಿಳಿಸಲಾಗಿದೆ.
ಜಿಲ್ಲಾಡಳಿತದ ಸಹಕಾರ ದೊರೆಯದಿದ್ದರೆ, ಭಕ್ತರು ಹಾಗೂ ದೇವಾಲಯದ ಪ್ರಮುಖರು ಪಕ್ಷಾತೀತವಾಗಿ ಹೋರಾಟ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ, ಹರಿಮಕ್ಕಿ ರತ್ನಾಕರ ಶೆಟ್ಟಿ, ಸುರೇಶ್ ನಾಯಕ್ ಕುಯಿಲಾಡಿ, ದಿನಕರ ಬಾಬು, ಕಿರಣ್ ಕುಮಾರ್ ಬೈಲೂರು, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ದಿನೇಶ್ ಅಮೀನ್, ರಾಜೀವ್ ಕುಲಾಲ್, ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.