
ಉಡುಪಿ : ಇತ್ತೀಚಿಗೆ ಛತ್ತೀಸ್ಗಡದಲ್ಲಿ ನಡೆದ ಎರಡು ಸಿಸ್ಟರ್ ಗಳ ಬಂಧನಕ್ಕೆ ಸಂಬಂಧಿಸಿದಂತೆ ಸರಕಾರ ಕೂಡಲೇ ತನಿಖೆಯನ್ನು ತೀವ್ರಗೊಳಿಸಿ ಬಂಧಿತರಾಗಿರುವ ಸಿಸ್ಟರ್ ಗಳನ್ನು ಶೀಘ್ರ ಬಿಡುಗಡೆಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್ ಡಿ’ಸೋಜ ಒತ್ತಾಯಿಸಿದ್ದಾರೆ.
ಈ ನಿಟ್ಟಿನಲ್ಲಿ ಪ್ರತಿಭಟನೆಯ ಪ್ರಹಸನಕ್ಕೆ ಮುoದಾಗಿರುವ ಭಾರತೀಯ ಕ್ರೈಸ್ತ ಒಕ್ಕೂಟ ಉಡುಪಿ ಮತ್ತು ಕಥೋಲಿಕ್ ಸಭಾ ಉಡುಪಿ ಇದರ ನಡೆ ಖಂಡನೀಯ.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿ ಶಿವಮೊಗ್ಗದ ರೋಮನ್ ಕ್ಯಾಥೋಲಿಕ್ ಚರ್ಚಿನ ಧರ್ಮ ಗುರುಗಳನ್ನು ವಿನಾಕಾರಣ ಬಂಧಿಸಿ ಮೂರು ತಿಂಗಳಿಗಿಂತಲೂ ಅಧಿಕ ಸಮಯ ಬಂಧನದಲ್ಲಿ ಇರಿಸಲಾಗಿದೆ. ಆ ಧರ್ಮ ಗುರುವಿನ ನರಕ ಯಾತನೆಯ ಬಗ್ಗೆ ಬಾಯಿ ಬಿಡದ, ಘಟನೆಯನ್ನು ಖಂಡಿಸದ ಹಾಗೂ ಮೇಣದ ಬತ್ತಿ ಹಿಡಿದುಕೊಂಡು ಮೆರವಣಿಗೆ ಮಾಡದ ಈ ಸಂಘಟನೆಗಳ ಸಮಯ ಸಾಧಕ ನಡೆಯನ್ನು ಖಂಡಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿದ್ದಾಗ ಕ್ರೈಸ್ತ ಧರ್ಮದ ಗುರುಗಳನ್ನು ಬಂಧಿಸಿ ತಿಂಗಳುಗಳ ಕಾಲ ಜೈಲಿನಲ್ಲಿ ಇಟ್ಟಿರುವ ಯಾವುದೇ ಉದಾಹರಣೆ ಇಲ್ಲ. ಈ ಎರಡೂ ಸಂಘಟನೆಗಳು ಕಾಂಗ್ರೆಸ್ ಪಕ್ಷದ ಏಜೆಂಟರಂತೆ ವರ್ತಿಸುವ ಬದಲು, ಉಡುಪಿ ಜಿಲ್ಲೆಯಲ್ಲಿರುವ ಬಡ ಕ್ರೈಸ್ತರ ನೆರವಿಗಾಗಿ ಕೆಲಸ ಮಾಡಬೇಕೆಂದು ವಿನಂತಿಸುತ್ತೇನೆ ಎಂದು ರುಡಾಲ್ಪ್ ಡಿಸೋ’ಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.