
ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಮಹಿಳಾ ಗ್ರಾಹಕರ ಮೊಬೈಲ್ ಸಂಖ್ಯೆಗಳನ್ನು ದುರುಪಯೋಗಪಡಿಸಿಕೊಂಡು, ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಡೆಲಿವರಿ ಬಾಯ್ ನನ್ನು ಹುಬ್ಬಳ್ಳಿಯ ಗೋಕುಲ್ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ರಮೇಶ್ ರೆಡ್ಡಿ, ವಿವಿಧ ಕೊರಿಯರ್ ಕಂಪನಿಗಳಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದನು.
ಕೊರಿಯರ್ ಕಂಪನಿಗಳು ತಮ್ಮ ಸಿಬ್ಬಂದಿ ರಜೆಯಲ್ಲಿದ್ದಾಗ ರಮೇಶ್ ರೆಡ್ಡಿಯನ್ನು ಡೆಲಿವರಿಗಾಗಿ ಬಳಸಿಕೊಳ್ಳುತ್ತಿದ್ದವು. ಆದರೆ, ಈತ ಕಂಪನಿಗಳು ನೀಡಿದ ಕೆಲಸವನ್ನು ಸರಿಯಾಗಿ ನಿರ್ವಹಿಸದೆ, ಮಹಿಳಾ ಗ್ರಾಹಕರಿಗೆ ತೊಂದರೆ ನೀಡಿದ್ದಾನೆ. ರಮೇಶ್ ರೆಡ್ಡಿ, ಮಹಿಳೆಯರ ಮೊಬೈಲ್ ನಂಬರ್‌ಗಳನ್ನು ಸೇವ್ ಮಾಡಿಕೊಂಡು, ‘ಹಾಯ್ ಬೇಬಿ’, ‘ಐ ವಾಂಟ್ ಟು ಮೀಟ್ ಯು’, ‘ಐ ಲವ್ ಯು’ ನಂತಹ ಅಶ್ಲೀಲ ಮತ್ತು ಅನುಚಿತ ಸಂದೇಶಗಳನ್ನು ಕಳುಹಿಸುತ್ತಿದ್ದನು. ಆತನ ಕಾಟವನ್ನು ತಾಳಲಾರದೆ ಅನೇಕರು ಆತನ ನಂಬರ್ ಅನ್ನು ಬ್ಲಾಕ್ ಮಾಡಿದ್ದರು.
ಆದರೆ, ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಇಬ್ಬರು ಮಹಿಳೆಯರು ಈತನಿಗೆ ಪಾಠ ಕಲಿಸಲು ಮುಂದಾದರು. ಕಿರುಕುಳ ಅತಿಯಾದಾಗ, ಈ ಇಬ್ಬರು ಮಹಿಳೆಯರು ಗೋಕುಲ್ ರೋಡ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಆರೋಪಿ ರಮೇಶ್ ರೆಡ್ಡಿಯನ್ನು ಪತ್ತೆ ಹಚ್ಚಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಈ ಘಟನೆಯ ಕುರಿತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, “ಅವಳಿ ನಗರದಲ್ಲಿ ಕೊರಿಯರ್ ಸೇವೆಗಳಿಗೆ ಕೆಲಸಗಾರರನ್ನು ನೇಮಿಸಿಕೊಳ್ಳುವ ಮೊದಲು ಅವರ ಹಿನ್ನೆಲೆಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಜೊತೆಗೆ, ಮಹಿಳೆಯರು ತಮ್ಮ ಮೊಬೈಲ್ ಸಂಖ್ಯೆಗಳನ್ನು ನೀಡುವಾಗ ಜಾಗರೂಕರಾಗಿರಬೇಕು” ಎಂದು ಮನವಿ ಮಾಡಿದ್ದಾರೆ.