
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ಪಾರಂಪರಿಕ ತಾಣವಾಗಿರುವ ಕೆಂಪುಕೋಟೆ ಹಾಗೂ ಸುತ್ತಮುತ್ತಲಿನ ಜನದಟ್ಟಣೆಯ ಪ್ರದೇಶಗಳಲ್ಲಿ ಸರಣಿ ಸ್ಫೋಟ ನಡೆಸಲು ಲಷ್ಕರ್-ಎ-ತೈಬಾ (ಎಲ್‌ಇಟಿ) ಉಗ್ರಗಾಮಿ ಸಂಘಟನೆ ಸಂಚು ರೂಪಿಸಿದೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಭದ್ರತೆಯನ್ನು ತೀವ್ರಗೊಳಿಸಲಾಗಿದೆ.
ಪಾಕಿಸ್ತಾನದ ಇಸ್ಲಾಮಾಬಾದ್ ಮಸೀದಿಯಲ್ಲಿ ಫೆಬ್ರವರಿ 6 ರಂದು ನಡೆದ ಸ್ಫೋಟಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಭಾರತದ ಪ್ರಮುಖ ಧಾರ್ಮಿಕ ಮತ್ತು ಐತಿಹಾಸಿಕ ಕೇಂದ್ರಗಳನ್ನು ಗುರಿಯಾಗಿಸಲು ಉಗ್ರರು ಯೋಜನೆ ಹಾಕಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ವಿಶೇಷವಾಗಿ ಹಳೆ ದೆಹಲಿಯ ಚಾಂದನಿ ಚೌಕ್ ಮತ್ತು ಕೆಂಪುಕೋಟೆ ಪರಿಸರದಲ್ಲಿ ಸುಧಾರಿತ ಸ್ಫೋಟಕಗಳನ್ನು (IED) ಬಳಸಿ ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಕಳೆದ ವರ್ಷ ನವೆಂಬರ್ 10 ರಂದು ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ನಡೆದ ಭೀಕರ ಕಾರು ಸ್ಫೋಟದಲ್ಲಿ 12 ಮಂದಿ ಬಲಿಯಾಗಿದ್ದ ಘಟನೆಯ ನಂತರ, ಇದೀಗ ಮತ್ತೊಮ್ಮೆ ದಾಳಿಯ ಭೀತಿ ಎದುರಾಗಿರುವುದು ಆತಂಕ ಮೂಡಿಸಿದೆ. ದೆಹಲಿ ಪೊಲೀಸರು ಪ್ರಮುಖ ವಲಯಗಳಲ್ಲಿ ಕಣ್ಗಾವಲು ಹೆಚ್ಚಿಸಿದ್ದು, ವಾಹನ ತಪಾಸಣೆ ಹಾಗೂ ಧಾರ್ಮಿಕ ಸ್ಥಳಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.



































