
ನವದೆಹಲಿ: ಭಾರತದ ಪ್ರಮುಖ ನಗರಗಳಲ್ಲಿ ಭೀಕರ ರಕ್ತಪಾತಕ್ಕೆ ಸಂಚು ರೂಪಿಸಿದ್ದ ಬೃಹತ್ ಭಯೋತ್ಪಾದಕ ಜಾಲವೊಂದನ್ನು ದೆಹಲಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಮತ್ತು ಬಾಂಗ್ಲಾದೇಶದ ಉಗ್ರ ಸಂಘಟನೆಗಳೊಂದಿಗೆ ನೇರ ಸಂಪರ್ಕ ಹೊಂದಿದ್ದ 8 ಮಂದಿ ಶಂಕಿತರನ್ನು ಅಧಿಕಾರಿಗಳು ಸೆರೆಹಿಡಿದಿದ್ದಾರೆ.
ತಿರುಪ್ಪೂರಿನ ಗಾರ್ಮೆಂಟ್ಸ್ ಘಟಕಗಳೇ ಅಡಗುತಾಣ
ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ಅಡಗಿದ್ದ ಉಗ್ರರ ಜಾಡನ್ನು ಪತ್ತೆಹಚ್ಚಿದ ಪೊಲೀಸರು, ಅಲ್ಲಿನ ವಿವಿಧ ಉಡುಪು ತಯಾರಿಕಾ ಕಾರ್ಖಾನೆಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕೆಲಸಗಾರರ ಸೋಗಿನಲ್ಲಿ ಅಡಗಿದ್ದ 6 ಮಂದಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಮಿಜಾನೂರ್ ರೆಹಮಾನ್, ಮೊಹಮ್ಮದ್ ಶಬತ್, ಉಮರ್, ಮೊಹಮ್ಮದ್ ಲಿತನ್, ಮೊಹಮ್ಮದ್ ಶಾಹಿದ್ ಮತ್ತು ಮೊಹಮ್ಮದ್ ಉಜ್ಜಲ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ತಮ್ಮ ಅಸಲಿ ಗುರುತನ್ನು ಮರೆಮಾಚಿ ಸ್ಥಳೀಯರಂತೆ ವಾಸಿಸುತ್ತಿದ್ದರು.
ಬಂಗಾಳದಲ್ಲೂ ಮುಂದುವರಿದ ಬೇಟೆ
ತಮಿಳುನಾಡಿನ ಕಾರ್ಯಾಚರಣೆಯ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲೂ ತನಿಖೆ ಚುರುಕುಗೊಳಿಸಿದ ದೆಹಲಿ ಪೊಲೀಸರು, ಅಲ್ಲಿ ಈ ಜಾಲಕ್ಕೆ ಸಂಬಂಧಿಸಿದ ಇನ್ನುಳಿದ 2 ಮಂದಿ ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು 8 ಮಂದಿ ಈಗ ಪೊಲೀಸ್ ಕಸ್ಟಡಿಯಲ್ಲಿದ್ದು, ಇವರಿಂದ ಸ್ಫೋಟಕ ಮಾಹಿತಿ ಹೊರಬರುವ ಸಾಧ್ಯತೆಯಿದೆ.
ನಕಲಿ ಆಧಾರ್ ಮತ್ತು ಡಿಜಿಟಲ್ ಪುರಾವೆಗಳ ಜಪ್ತಿ
ಬಂಧಿತರ ಪೈಕಿ ಹಲವರು ಬಾಂಗ್ಲಾದೇಶದ ಪ್ರಜೆಗಳಾಗಿದ್ದು, ಭಾರತದೊಳಗೆ ಅಕ್ರಮವಾಗಿ ನುಸುಳಿ ಇಲ್ಲಿ ವಾಸಿಸಲು ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿಕೊಂಡಿದ್ದರು. ತನಿಖೆಯ ವೇಳೆ ಇವರಿಂದ 8 ಮೊಬೈಲ್ ಫೋನ್‌ಗಳು ಹಾಗೂ 16 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನಿ ಹ್ಯಾಂಡ್ಲರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಕೆಂಪುಕೋಟೆ ಮತ್ತು ಧಾರ್ಮಿಕ ಕೇಂದ್ರಗಳ ಮೇಲೆ ಕಣ್ಣು
ಗುಪ್ತಚರ ಮೂಲಗಳ ಪ್ರಕಾರ, ಈ ಮಾಡ್ಯೂಲ್ ದೆಹಲಿಯ ಐತಿಹಾಸಿಕ ಕೆಂಪುಕೋಟೆ ಹಾಗೂ ಚಾಂದನಿ ಚೌಕ್‌ನ ಪ್ರಮುಖ ದೇವಾಲಯಗಳ ಮೇಲೆ ದಾಳಿ ನಡೆಸಲು ಸ್ಕೆಚ್ ಹಾಕಿತ್ತು. ದೇಶದ ಶಾಂತಿ ಕೆಡಿಸಲು ಐಇಡಿ (IED) ಸ್ಫೋಟ ನಡೆಸುವ ತಯಾರಿಯಲ್ಲಿದ್ದ ಈ ತಂಡವನ್ನು ಸಕಾಲದಲ್ಲಿ ಪತ್ತೆಹಚ್ಚುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಲಾಗಿದೆ.



































