
ನವದೆಹಲಿ: ದೈಹಿಕ ಸಂಬಂಧವಿತ್ತು ಎಂದು ಆರೋಪಿಸಿದ ಮಾತ್ರಕ್ಕೆ ಅದು ಅತ್ಯಾಚಾರ ಎಂದು ಸಾಬೀತಾಗುವುದಿಲ್ಲ, ಅದಕ್ಕೆ ದೃಢವಾದ ಸಾಕ್ಷಿಗಳಿರಬೇಕು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅತ್ಯಾಚಾರ ಪ್ರಕರಣದಲ್ಲಿ ವಿಧಿಸಲಾದ 10 ವರ್ಷಗಳ ಶಿಕ್ಷೆಯನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಲಯವು ಈ ನಿರ್ಣಯಕ್ಕೆ ಬಂದಿದೆ.
“ಕೇವಲ ದೈಹಿಕ ಸಂಬಂಧ (Physical Relationship)ವಿತ್ತು ಎಂದು ಆರೋಪಿಸಿದ ಮಾತ್ರಕ್ಕೆ ಅದು ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಎಂದು ಸಾಬೀತುಪಡಿಸಲು ಸಾಕಾಗುವುದಿಲ್ಲ,” ಎಂದು ನ್ಯಾಯಾಲಯ ಹೇಳಿದೆ.
ಪೋಕ್ಸೋ (POCSO) ಕಾಯ್ದೆಯಡಿ ದೈಹಿಕ ಸಂಬಂಧ ಎಂಬ ಪದವನ್ನು ಬಳಸಲಾಗಿಲ್ಲ. ಆದರೆ, ಲೈಂಗಿಕ ದೌರ್ಜನ್ಯ (Sexual Assault) ಅಥವಾ ಅತ್ಯಾಚಾರ ಎನ್ನುವುದನ್ನು ಸಾಬೀತುಪಡಿಸಲು ಸ್ಪಷ್ಟ ಸಾಕ್ಷ್ಯ ಬೇಕಾಗುತ್ತದೆ ಎಂದು ತಿಳಿಸಿದ ಹೈಕೋರ್ಟ್, 10 ವರ್ಷ ಶಿಕ್ಷೆಗೆ ಒಳಗಾಗಿದ್ದ ಆ ವ್ಯಕ್ತಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. ಈ ತೀರ್ಪು ಅತ್ಯಾಚಾರ ಪ್ರಕರಣಗಳಲ್ಲಿ ಸಾಕ್ಷ್ಯಗಳ ಮಹತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.



































