
ನವದೆಹಲಿ: ರಾಷ್ಟ್ರ ರಾಜಧಾನಿಯ ಹಳೆ ದೆಹಲಿ ಭಾಗದಲ್ಲಿ ಬುಧವಾರ ನಸುಕಿನ ವೇಳೆ ಅತಿಕ್ರಮಣ ತೆರವು ಕಾರ್ಯಾಚರಣೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಸಂಘರ್ಷ ಉಂಟಾಗಿದೆ.
ನಸುಕಿನ ವೇಳೆ ಬುಲ್ಡೋಜರ್ ಘರ್ಜನೆ:
ದೆಹಲಿ ಹೈಕೋರ್ಟ್ ನೀಡಿದ ಆದೇಶದ ಅನ್ವಯ, ತುರ್ಕಮನ್ ಗೇಟ್ ಪ್ರದೇಶದ ಫೈಜ್-ಎ-ಇಲಾಹಿ ಮಸೀದಿಯ ಸಮೀಪವಿರುವ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಅಧಿಕಾರಿಗಳು ಮುಂದಾಗಿದ್ದರು. ಬುಧವಾರ ಮುಂಜಾನೆ 1 ಗಂಟೆಯ ಸುಮಾರಿಗೆ 17 ಬುಲ್ಡೋಜರ್‌ಗಳೊಂದಿಗೆ ಕಾರ್ಯಾಚರಣೆ ಆರಂಭವಾಯಿತು. ಈ ವೇಳೆ ಅತಿಕ್ರಮಣ ತೆರವುಗೊಳಿಸುವುದನ್ನು ವಿರೋಧಿಸಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ಮೇಲೆ ಕಲ್ಲು ತೂರಾಟ:
ಕಾರ್ಯಾಚರಣೆ ನಡೆಯುತ್ತಿದ್ದಂತೆ ಆಕ್ರೋಶಿತ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಈ ಘಟನೆಯಲ್ಲಿ ಸುಮಾರು ಐವರು ಪೊಲೀಸ್ ಅಧಿಕಾರಿಗಳಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ಜನಸಂದಣಿಯನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.
ನ್ಯಾಯಾಲಯದ ಆದೇಶ ಮತ್ತು ವಿವಾದ:
ರಾಮಲೀಲಾ ಮೈದಾನಕ್ಕೆ ಹೊಂದಿಕೊಂಡಿರುವ ಮಸೀದಿ ಮತ್ತು ಶ್ಮಶಾನದ ಭೂಮಿಯಲ್ಲಿನ ಅತಿಕ್ರಮಣ ತೆರವಿಗೆ ಎಂಸಿಡಿ ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ ಮಸೀದಿ ಸಮಿತಿ ಹೈಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯವು ನೋಟಿಸ್ ಜಾರಿ ಮಾಡಿದ್ದರೂ ಸಹ, ಈ ಹಿಂದಿನ ಆದೇಶಗಳ ಅನ್ವಯ ತೆರವು ಪ್ರಕ್ರಿಯೆಯನ್ನು ಅಧಿಕಾರಿಗಳು ಮುಂದುವರಿಸಿದ್ದಾರೆ.



































