
ಹೊಸದಿಲ್ಲಿ: ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಫೆಬ್ರವರಿ 5ರಂದು ನಡೆದ ಮತದಾನದಲ್ಲಿ ಶೇ.60.54 ರಷ್ಟು ಮತ ಚಲಾಯಿಸಲಾಗಿತ್ತು. ಶನಿವಾರ (ಫೆ.08) ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದ್ದು, ಮಧ್ಯಾಹ್ನಕ್ಕೆ ಸ್ಪಷ್ಟನೆ ಸಿಗಲಿದೆ.
ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಕಳೆದ ಎರಡು ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್, ಈ ಬಾರಿ ಕೂಡ ಅಧಿಕಾರವನ್ನು ಉಳಿಸಿಕೊಳ್ಳಬಹುದಾ ಎಂಬ ಕುತೂಹಲ ಹೆಚ್ಚಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ತಮ್ಮ ಸ್ಥಾನವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿವೆ.
ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಗೆಲುವನ್ನು ಭವಿಷ್ಯ ನುಡಿಸಿದ್ದರೂ, ಅಂತಿಮ ಫಲಿತಾಂಶ ಮಾತ್ರ ಮತ ಎಣಿಕೆಯ ನಂತರವೇ ಸ್ಪಷ್ಟವಾಗಲಿದೆ. ಕಳೆದ ಬಾರಿ ಶೂನ್ಯಕ್ಕೆ ಕುಸಿದಿದ್ದ ಕಾಂಗ್ರೆಸ್ ಈ ಬಾರಿ ಮೆಚ್ಚುಗೆಯ ಫಲಿತಾಂಶ ಕಾಣಬಹುದಾ ಎಂಬುವುದರತ್ತವೂ ರಾಜಕೀಯ ವಲಯ ಗಮನ ಹರಿಸಿದೆ.
ಈ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಆತಿಶಿ, ಅಲ್ಕಾ ಲಂಬಾ, ಸೌರಭ್ ಭಾರದ್ವಾಜ್, ಹರೀಶ್ ಖುರಾನಾ, ಸೋಮನಾಥ್ ಭಾರತಿ ಸೇರಿದಂತೆ ಪ್ರಮುಖ ಮುಖಂಡರು ಕಣಕ್ಕಿಳಿದಿದ್ದಾರೆ.