

ಮಂಗಳೂರು-ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಿಲ್ಲಿಗೆ ನೇರ ವಿಮಾನ ಸೇವೆ ಶುಕ್ರವಾರದಿಂದ ಆರಂಭಗೊಂಡಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯ ಉದ್ಘಾಟನಾ ವಿಮಾನ ಐಎಕ್ಸ್ 1552 ಬೆಳಗ್ಗೆ 6.40ಕ್ಕೆ ಮಂಗಳೂರಿನಿಂದ ಹೊರಟು 9.35ಕ್ಕೆ ದಿಲ್ಲಿಗೆ ತಲುಪಿತು. ಅದೇ ರೀತಿ, ದಿಲ್ಲಿಯಿಂದ ಹೊರಟ ಐಎಕ್ಸ್ 2768 ವಿಮಾನ ಬೆಳಗ್ಗೆ 9.35ಕ್ಕೆ ಮಂಗಳೂರಿಗೆ ಬಂದಿಳಿಯಿತು.
ಪ್ರಾರಂಭದ ದಿನ 167 ಮಂದಿ ಮಂಗಳೂರು-ದಿಲ್ಲಿ ವಿಮಾನದಲ್ಲಿ ಪ್ರಯಾಣಿಸಿದರು, ಹಾಗೇ 144 ಪ್ರಯಾಣಿಕರು ದಿಲ್ಲಿ-ಮಂಗಳೂರು ಮಾರ್ಗದಲ್ಲಿ ಪ್ರಯಾಣಿಸಿದರು. ಈ ಸೇವೆ ಪ್ರತಿದಿನವೂ ಲಭ್ಯವಿರಲಿದೆ. ಹೊಸ ವಿಮಾನಕ್ಕೆ ವಿಮಾನ ನಿಲ್ದಾಣದ ಅಗ್ನಿಶಾಮಕ ತಂಡದಿಂದ ಜಲಫಿರಂಗಿ ಗೌರವ ಸಲ್ಲಿಸಲಾಯಿತು.
ಇನ್ನು, ಮಂಗಳೂರು-ಮುಂಬಯಿ ಮಾರ್ಗದಲ್ಲಿ ಕಾರ್ಯಾಚರಿಸುತ್ತಿದ್ದ ಏರ್ ಇಂಡಿಯಾ ಕಂಪೆನಿಯ ವಿಮಾನ ಸೇವೆ ಜನವರಿ 31ರಿಂದ ಸ್ಥಗಿತಗೊಂಡಿದೆ. ಮುಂಬರುವ ದಿನಗಳಲ್ಲಿ ಈ ಮಾರ್ಗದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇವೆ ನೀಡಲಿದೆ. ಏರ್ ಇಂಡಿಯಾ ಪ್ರೀಮಿಯಂ ಸೇವೆ ನೀಡಿದರೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕಡಿಮೆ ದರದಲ್ಲಿ ಬಜೆಟ್ ಸೇವೆ ಒದಗಿಸುತ್ತದೆ.