
ಹೊಸದಿಲ್ಲಿ : ಭಾರತವು ಅಮೆರಿಕದಿಂದ ಶಸ್ತ್ರಾಸ್ತ್ರಗಳ ಖರೀದಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂಬ ಮಾಧ್ಯಮ ವರದಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ರಕ್ಷಣಾ ಸಚಿವಾಲಯವು, ಈ ವರದಿಯು ಸುಳ್ಳು ಮತ್ತು ಕಟ್ಟುಕಥೆ ಎಂದು ಸ್ಪಷ್ಟಪಡಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಮೆರಿಕ ಪ್ರವಾಸ ರದ್ದುಗೊಂಡ ಬೆನ್ನಲ್ಲೇ ಈ ಸುದ್ದಿ ಪ್ರಾಮುಖ್ಯತೆ ಪಡೆದಿತ್ತು.
ರಾಯಿಟರ್ಸ್ ವರದಿಯಲ್ಲಿ ಏನಿದೆ?
ರಾಯಿಟರ್ಸ್ ಸುದ್ದಿ ಸಂಸ್ಥೆಯು ಪ್ರಕಟಿಸಿದ ವರದಿಯ ಪ್ರಕಾರ, ಭಾರತದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕದ ಸುಂಕ ಹೆಚ್ಚಳಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಈ ನಿರ್ಧಾರ ಕೈಗೊಂಡಿದೆ. ಶಸ್ತ್ರಾಸ್ತ್ರ, ಕ್ಷಿಪಣಿ ಮತ್ತು ಯುದ್ಧವಿಮಾನಗಳ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂವರು ಉನ್ನತಾಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ವರದಿ ಹೇಳಿತ್ತು. ಇದೇ ಸಮಯದಲ್ಲಿ ರಕ್ಷಣಾ ಸಚಿವರ ಅಮೆರಿಕ ಭೇಟಿಯೂ ರದ್ದಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಸುದ್ದಿ ಸುಳ್ಳು ಎಂದ ರಕ್ಷಣಾ ಸಚಿವಾಲಯ
ಆದರೆ, ಈ ವರದಿಯನ್ನು ಸಂಪೂರ್ಣವಾಗಿ ನಿರಾಕರಿಸಿರುವ ರಕ್ಷಣಾ ಸಚಿವಾಲಯವು ಪತ್ರಿಕಾ ಪ್ರಕಟಣೆ ಹೊರಡಿಸಿದೆ. “ಅಮೆರಿಕದ ಶಸ್ತ್ರಾಸ್ತ್ರ ಖರೀದಿಯನ್ನು ಸ್ಥಗಿತಗೊಳಿಸಿರುವ ಮಾಧ್ಯಮ ವರದಿಯು ಸುಳ್ಳು ಹಾಗೂ ಕಟ್ಟುಕಥೆಯಾಗಿದೆ. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಖರೀದಿ ಪ್ರಕ್ರಿಯೆಗಳು ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ನಡೆಯುತ್ತಿವೆ” ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.