
ಬೆಂಗಳೂರು, ಫೆಬ್ರವರಿ.22: ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಮಾನನಷ್ಟ ಮೊಕದ್ದಮೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದ್ದು, ರಾಜಿ ಸಂಧಾನಕ್ಕೆ ಮತ್ತೊಮ್ಮೆ ಸಲಹೆ ನೀಡಿದೆ.
ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ಪೀಠ, ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಮಾರ್ಚ್ 12ರವರೆಗೆ ತಡೆ ನೀಡಿದೆ. ಹೀಗಾಗಿ, ರೋಹಿಣಿ ಸಿಂಧೂರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಡಿ.ರೂಪಾ ತಮ್ಮ ವಿರುದ್ಧ ದಾಖಲಿಸಿರುವ ಮೊಕದ್ದಮೆಗೆ ತಡೆ ನೀಡುವಂತೆ ರೋಹಿಣಿ ಸಿಂಧೂರಿ ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆ ವೇಳೆ, ನ್ಯಾಯಾಲಯವು ಇಬ್ಬರೂ ಅಧಿಕಾರಿಗಳಿಗೆ ರಾಜಿ ಸಂಧಾನಕ್ಕೆ ಒತ್ತಾಯಿಸುತ್ತಾ, ಪರಸ್ಪರ ಸಮಾಲೋಚನೆ ನಡೆಸಿ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದೆ.
ಈ ಹಿಂದೆ ಈ ಇಬ್ಬರು ಅಧಿಕಾರಿಗಳ ಕಾನೂನು ಸಂಘರ್ಷ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯವು ಅವರಿಂದ ಪರಸ್ಪರ ರಾಜಿ ಸಂಧಾನಕ್ಕೆ ಪ್ರಯತ್ನಿಸಲು ಸಲಹೆ ನೀಡಿದ್ದರೂ, ಇಬ್ಬರೂ ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.
ಈ ಸಂಬಂಧ ಮುಂದಿನ ವಿಚಾರಣೆ ಮಾರ್ಚ್ 12 ರಂದು ನಡೆಯಲಿದೆ.