
ಬೆಂಗಳೂರು: ನಟ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಅವರು ನೀಡಿದ್ದ ಹೇಳಿಕೆಗಳಿಗೆ ನಟಿ ದೀಪಿಕಾ ದಾಸ್ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಹೊರಬಂದಿವೆ.
ಪುಷ್ಪ ಹೇಳಿದ್ದೇನು?
ತಮ್ಮ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ಪ್ರಚಾರದ ಸಂದರ್ಶನವೊಂದರಲ್ಲಿ ಪುಷ್ಪ ಅವರನ್ನು ದೀಪಿಕಾ ದಾಸ್ ಕುರಿತು ಪ್ರಶ್ನಿಸಿದಾಗ, “ದೀಪಿಕಾ ದಾಸ್‌ಗೂ ನಮಗೂ ಆಗಿ ಬರೋದಿಲ್ಲ. ನಮ್ಮ ಸಿನಿಮಾಗೆ ಆಯ್ಕೆ ಮಾಡಿಕೊಳ್ಳಲು ಅವಳು ಯಾವ ದೊಡ್ಡ ಹೀರೋಯಿನ್? ಸಂಬಂಧ ಆದರೂ ಅವಳನ್ನು ದೂರದಲ್ಲಿ ಇಟ್ಟಿದ್ದೀವಿ. ಅವರ ಬಗ್ಗೆ ಯಾಕೆ ಕೇಳ್ತೀರಾ? ನನ್ನ ಮಗ ಬೈಯಲ್ವಾ?” ಎಂದು ಹೇಳಿದ್ದರು. “ದೀಪಿಕಾ ದಾಸ್‌ಗೆ ನನ್ನ ಕಂಡರೆ ಭಯ” ಎಂದು ಕೂಡ ಈ ಹಿಂದೆ ಹೇಳಿದ್ದರು.
ದೀಪಿಕಾ ದಾಸ್ ಖಡಕ್ ಉತ್ತರ
ಪುಷ್ಪ ಅವರ ಈ ಹೇಳಿಕೆಗಳಿಗೆ ದೀಪಿಕಾ ದಾಸ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. “ಹೊಸ ಕಲಾವಿದರನ್ನು ಬೆಳೆಸುವವರು ಮೊದಲು ಅವರಿಗೆ ಬೆಲೆ ಕೊಡುವುದನ್ನು ಕಲಿಯಬೇಕು” ಎಂದು ಅವರು ಹೇಳಿದರು.
“ಇಲ್ಲಿಯವರೆಗೆ ನಾನು ಯಾರ್ ಹೆಸರನ್ನು ಹೇಳಿಕೊಂಡು ಬಂದಿಲ್ಲ, ಮುಂದೆಯೂ ಬರೋದಿಲ್ಲ. ಕೆಲವರಿಗೆ ಬೆಲೆ ಕೊಟ್ಟ ಮಾತ್ರಕ್ಕೆ ಯಾರನ್ನು ಕಂಡು ಯಾರಿಗೂ ಭಯವಿಲ್ಲ, ಅದು ಅಮ್ಮ ಆದರೂ ಸರಿ, ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ” ಎಂದು ಅವರು ನೇರವಾಗಿ ಉತ್ತರ ನೀಡಿದ್ದಾರೆ. “ನಾನು ಯಾವ ದೊಡ್ಡ ನಟಿ ಅಲ್ಲದಿದ್ದರೂ ಅಥವಾ ಏನೂ ಸಾಧನೆ ಮಾಡದಿದ್ದರೂ ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಹಕ್ಕು ಯಾರಿಗೂ ಇಲ್ಲ” ಎಂದು ದೀಪಿಕಾ ಸ್ಪಷ್ಟಪಡಿಸಿದ್ದಾರೆ.