
ಕಾರ್ಕಳ : ಶಸ್ತ್ರಚಿಕಿತ್ಸೆ ವೇಳೆ ಸಂಭವಿಸಿದ ವಿಪರೀತ ರಕ್ತಸ್ರಾವದಿಂದ 54 ವರ್ಷದ ಮಹಿಳೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪದೊಂದಿಗೆ ಮೃತಳ ಕುಟುಂಬಸ್ಥರು ಮತ್ತು ಸ್ಥಳೀಯರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಸಂಜೆ ಕಾರ್ಕಳದ ಸ್ಪಂದನ ಆಸ್ಪತ್ರೆಯಲ್ಲಿ ನಡೆದಿದೆ.
ಸಾಣೂರು ಗ್ರಾಮದ ನಿವಾಸಿ ಜುಬೇದಾ (54) ಅವರು ಕೆಲ ಸಮಯದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಸ್ಥಳೀಯ ಕ್ಲಿನಿಕ್‌ನಲ್ಲಿ ತಪಾಸಣೆ ನಡೆಸಿದಾಗ, ಹೊಟ್ಟೆಯಲ್ಲಿ ಗಡ್ಡೆ ಬೆಳೆಯುತ್ತಿರುವುದು ತಿಳಿದುಬಂದು ಶಸ್ತ್ರಚಿಕಿತ್ಸೆಗೆ ಶಿಫಾರಸ್ಸು ಮಾಡಲಾಗಿತ್ತು.
ಬುಧವಾರ ಬೆಳಿಗ್ಗೆ ಅವರನ್ನು ಕಾರ್ಕಳದ ಖಾಸಗಿ ಸ್ಪಂದನ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಆರಂಭಿಸಲಾಗಿತ್ತು. ಆದರೆ, ಶಸ್ತ್ರಚಿಕಿತ್ಸೆಯ ವೇಳೆ ಅತಿಯಾದ ರಕ್ತಸ್ರಾವ ಸಂಭವಿಸಿದ್ದು, ವೈದ್ಯರು ತುರ್ತು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜುಬೇದಾ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ರಕ್ತಸಿಕ್ತ ಬಟ್ಟೆಗಳು ಹಾಗೂ ಚಿಕಿತ್ಸೆ ವೇಳೆ ಬಿದ್ದ ರಕ್ತದ ಗುರುತುಗಳು ಆಸ್ಪತ್ರೆಯ ಬೆಡ್ ಬಳಿ ಕಂಡುಬಂದಿರುವುದು , ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿವೆ. ಆಸ್ಪತ್ರೆಯಲ್ಲಿ ಗುಂಪು ಜಮಾಯಿಸಿದ ಕುಟುಂಬಸ್ಥರು ಮತ್ತು ಸ್ಥಳೀಯರು ವೈದ್ಯರ ವಿರುದ್ಧ ಘೋಷಣೆ ಕೂಗಿ “ನಿರ್ಲಕ್ಷ್ಯದಿಂದ ಸಾವು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.