
ಬೆಂಗಳೂರು: ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆಯ ಬಗ್ಗೆ ಅಪಾಯದ ಎಚ್ಚರಿಕೆ ಹೊರಬಿದ್ದ ಬಳಿಕ, ಈಗ ಹಸಿರು ಬಟಾಣಿಯಲ್ಲೂ ಮಾರಕ ಕಲಬೆರಕೆ ಅಂಶ ಪತ್ತೆಯಾಗಿದೆ. ಇದರ ಪರಿಣಾಮವಾಗಿ ಬಟಾಣಿಗೆ ಬಣ್ಣ ಬಳಕೆ ನಿರ್ಬಂಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಾರಕ ರಾಸಾಯನಿಕ ಪತ್ತೆ
ಪರೀಕ್ಷೆಯಲ್ಲಿ ಬಟಾಣಿಯಲ್ಲಿ ಬ್ರಿಲಿಯಂಟ್ ಬ್ಲೂ ಮತ್ತು ಟೆಟಾರ್ಜಿನ್ (ಹಳದಿ ಬಣ್ಣದ ರಾಸಾಯನಿಕ) ಇರುವುದು ಪತ್ತೆಯಾಗಿದ್ದು, ಇದರ ಸೇವನೆಯಿಂದ ಆರೋಗ್ಯಕ್ಕೆ ತೀವ್ರ ಹಾನಿ ಉಂಟಾಗುವ ಸಾಧ್ಯತೆ ಇದೆ. ಇದಲ್ಲದೆ, ಕ್ಯಾನ್ಸರ್ ಹುಟ್ಟುಹಾಕುವ ಅಂಶಗಳು ಕೂಡಾ ಪತ್ತೆಯಾಗಿವೆ ಎಂದು ಪ್ರಾಥಮಿಕ ವರದಿ ಸೂಚಿಸಿದೆ.
ಬ್ಯಾನ್ ಗೆ ಶಿಫಾರಸು
ಈ ಬೆಳವಣಿಗೆಯ ಬೆನ್ನಲ್ಲೇ ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ಬಟಾಣಿಗೆ ಬಣ್ಣ ಬಳಕೆ ನಿಷೇಧ ಮಾಡಲು ಶಿಫಾರಸು ಮಾಡಿರುವುದು ತಿಳಿದುಬಂದಿದೆ. ಮತ್ತಷ್ಟು ಪರೀಕ್ಷೆಗಳ ನಂತರ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಅಂದಾಜಿಸಲಾಗಿದೆ.
ಈ ಬೆಳವಣಿಗೆಯ ನಡುವೆ ಬಣ್ಣದ ಬಟಾಣಿಯ ಮಾರಾಟ ತಡೆಗಟ್ಟುವ ಕ್ರಮ ಇನ್ನಷ್ಟೇ ಜಾರಿಯಾಗಬೇಕಿದ್ದು, ಮಾರಾಟ ಮಾತ್ರ ನಿಂತಿಲ್ಲ. ಹೀಗಾಗಿ, ಬಟಾಣಿ ಸಂಪೂರ್ಣ ನಿಷೇಧವಾಗುತ್ತಾ ಅಥವಾ ನಿಯಮಿತ ನಿಯಂತ್ರಣದೊಂದಿಗೆ ಮಾರುಕಟ್ಟೆಗೆ ಮರಳುತ್ತಾ? ಎಂಬುದನ್ನು ಕಾದು ನೋಡಬೇಕು.