
ಕೋಟ : ಉಡುಪಿ ಜಿಲ್ಲೆ ಸಾಸ್ತಾನದ ಗುಂಡ್ಮಿ ಟೋಲ್ ಗೇಟ್ ಬಳಿ ನಿಲ್ಲಿಸಿದ್ದ ಲಾರಿಯೊಳಗೆ ಚಾಲಕ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಲಾರಿ ಗುಜರಾತ್ ರಾಜ್ಯಕ್ಕೆ ಸೇರಿದ ನೋಂದಣಿಯದ್ದಾಗಿದೆ.
ಸಾಲಿಗ್ರಾಮದ ನಿವಾಸಿ ಸುನಿಲ್ ಕುಮಾರ್ ಎಂಬವರು, ಎರಡು ದಿನಗಳಿಂದ ಲಾರಿ ಟೋಲ್ ಬಳಿ ನಿಲ್ಲಿಸಿರುವುದನ್ನು ಗಮನಿಸಿ ಅನುಮಾನಗೊಂಡು ಗುರುವಾರ ಸಂಜೆ ಲಾರಿಯ ಹತ್ತಿರ ತೆರಳಿದಾಗ, ಚಾಲಕನು ಲಾರಿಯ ಮುಂದಿನ ಸೀಟಿನ ಕೆಳಭಾಗದಲ್ಲಿ ಮಲಗಿ ಮೃತಪಟ್ಟಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕೂಡಲೇ ಅವರು ಕೋಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಲಾರಿಯಲ್ಲಿ ದೊರೆತ ಮೊಬೈಲ್ ಸಂಖ್ಯೆಯಿಂದ ಲಾರಿ ಮಾಲಕರನ್ನು ಸಂಪರ್ಕ ಮಾಡಲಾಗಿದ್ದು, ಲಾರಿ ಕೇರಳದಿಂದ ಗುಜರಾತ್ ಕಡೆಗೆ ತೆರಳುತ್ತಿದ್ದರೆಂದು ತಿಳಿದುಬಂದಿದೆ. ಚಾಲಕನನ್ನು ತಾಯಿರ್ ಬಾಯಿ (55) ಎಂದು ಗುರುತಿಸಲಾಗಿದೆ. ಅವರು ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಅವರ ಮಾಲಕರಿಂದ ಲಭಿಸಿದೆ.
ಬುಧವಾರ ಸಂಜೆದಿಂದ ಮೇ 8ರ ಗುರುವಾರ ಮಧ್ಯಾಹ್ನದೊಳಗೆ ಅವರು ನಿಧನರಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಕುಂದಾಪುರದ ಶವಗಾರಕ್ಕೆ ಸ್ಥಳಾಂತರಿಸಲಾಗಿದೆ.