
ಮಂಡ್ಯ : ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಗಾವಲು ವಾಹನ ಶನಿವಾರ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಪಲ್ಟಿಯಾಗಿ ಅದರಲ್ಲಿದ್ದ ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಡಿ.ಕೆ. ಶಿವಕುಮಾರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವ್ಯಾಪ್ತಿಯ ಗೌಡಹಳ್ಳಿ ಟಿ.ಎಂ. ಹೊಸೂರು ಬಳಿ, ಎಕ್ಸ್‌ಪ್ರೆಸ್‌ವೇನಲ್ಲಿ ಈ ಘಟನೆ ನಡೆದಿದೆ. ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ.

ಬೆಂಗಾವಲು ವಾಹನದಲ್ಲಿದ್ದ ಇಬ್ಬರು ಎಸ್ಕಾರ್ಚ್ ಸಿಬ್ಬಂದಿ ಡಿವೈಡರ್‌ಗೆ ಡಿಕ್ಕಿ ಹೊಡೆದು ವಾಹನ ಪಲ್ಟಿಯಾಗಿದೆ. ಅಪಘಾತದಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣವೇ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಡಿ.ಕೆ. ಶಿವಕುಮಾರ್ ಅವರು ಕುಳಿತಿದ್ದ ಕಾರು, ಅಪಘಾತಕ್ಕೀಡಾದ ಬೆಂಗಾವಲು ವಾಹನವನ್ನು ಹಿಂಬಾಲಿಸುತ್ತಿತ್ತು. ಎರಡು ಕಾರುಗಳ ನಡುವೆ ಸಾಕಷ್ಟು ಅಂತರವಿದ್ದ ಕಾರಣ, ಡಿ.ಕೆ. ಶಿವಕುಮಾರ್ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆ ಬಳಿಕ ಅವರು ತಮ್ಮ ಬೆಂಗಳೂರಿನ ಪ್ರಯಾಣವನ್ನು ಮುಂದುವರಿಸಿದರು ಎಂದು ತಿಳಿದುಬಂದಿದೆ.