
ಬೆಂಗಳೂರು: ಬಿಜೆಪಿಯಿಂದ ಆಫರ್ ಬಂದಿತ್ತು. ಅದನ್ನು ಒಪ್ಪಿಕೊಂಡಿದ್ದರೆ ನಾನು ಆಗಲೇ ಉಪಮುಖ್ಯಮಂತ್ರಿಯಾಗಬಹುದಿತ್ತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಜೆಪಿಯ ಆಫರ್ ನೀಡಿದ್ದ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ನಗರದ ಎಫ್.ಕೆ.ಸಿ.ಸಿ.ಐ. ಸಭಾಂಗಣದಲ್ಲಿ ಬುಧವಾರ ನಡೆದ ಕೆ.ಎಂ. ರಘು ಡೈರೆಕ್ಟರ್ ಅವರು ಬರೆದಿರುವ ಡಿ.ಕೆ. ಶಿವಕುಮಾರ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವ ವೇಳೆ ಪಕ್ಷ ನಿಷ್ಠನಾಗಿ ಜೈಲುವಾಸ ಆಯ್ಕೆ ಮಾಡಿಕೊಂಡೆ. ಅಂದು ನಾನು ಬೇರೆ ಆಯ್ಕೆ ಮಾಡಿದ್ದರೆ ಏನೇನು ಆಗುತ್ತಾ ಇತ್ತೋ ಗೊತ್ತಿಲ್ಲ ಎಂದು ಹೇಳಿದರು.
ಜೈಲು ಅಥವಾ ಡಿಸಿಎಂ ಆಯ್ಕೆ
ಸಮ್ಮಿಶ್ರ ಸರ್ಕಾರದಲ್ಲಿದ್ದ ಹತ್ತು ಜನ ಶಾಸಕರು ರಾಜೀನಾಮೆ ನೀಡಲು ಹೊರಟಿದ್ದ ಸಂದರ್ಭದ ಕುರಿತು ಮಾತನಾಡಿದ ಡಿ.ಕೆ.ಶಿ, “ಕನಕಪುರದಲ್ಲಿದ್ದ ನಾನು ಬೆಂಗಳೂರಿಗೆ ಬಂದು ಐದಾರು ಜನರನ್ನು ವಾಪಸ್ ಕ್ವಾಟ್ರಸ್‌ಗೆ ಕರೆದುಕೊಂಡು ಬಂದೆ. ಆಗ ನನಗೆ ಒಬ್ಬ ಆದಾಯ ತೆರಿಗೆ ಆಡಿಟರ್‌ನ ಫೋನ್‌ನಿಂದ ಕರೆ ಬಂದಿತ್ತು. ನನ್ನ ಜೊತೆ ಡಿಜಿಯೂ ಇದ್ದರು. ಕರೆ ಮಾಡಿದವರು, ನೀವು ಡಿಸಿಎಂ ಆಗುವಿರಾ ಅಥವಾ ಜೈಲಿಗೆ ಹೋಗುವಿರಾ? ಎಲ್ಲಾ ಶಾಸಕರನ್ನು ವಾಪಸ್ಸು ಕರೆದುಕೊಂಡು ಬನ್ನಿ,” ಎಂದು ಆಯ್ಕೆ ನೀಡಿದರು.
“ಆಗ ನಾನು ನನಗೆ ಇಷ್ಟೆಲ್ಲಾ ಸ್ಥಾನ ನೀಡಿರುವ ಪಕ್ಷವನ್ನು ಬಿಡುವುದಿಲ್ಲ. ಬೇಕಾದರೆ ಜೈಲಿಗೆ ಹೋಗುತ್ತೇನೆ ಎಂದೆ. ಕಾಂಗ್ರೆಸ್ ಪಕ್ಷದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಜೈಲು ಆಯ್ಕೆ ಮಾಡಿಕೊಂಡೆ. ತಿಹಾರ್ ಜೈಲಿಗೆ ನನ್ನ ಮೇಲೆ ಷಡ್ಯಂತ್ರ ಮಾಡಿ ಕಳುಹಿಸಿದಾಗಲೂ ನನ್ನ ಕ್ಷೇತ್ರದ ಜನ ನನ್ನ ಜೊತೆ ನಿಂತಿದ್ದಾರೆ,” ಎಂದು ಡಿ.ಕೆ.ಶಿ ಭಾವನಾತ್ಮಕವಾಗಿ ತಿಳಿಸಿದರು.
ಹೊಸ ನಾಯಕರ ಅಗತ್ಯ ಮತ್ತು ವೈಯಕ್ತಿಕ ಅನುಭವ
ರಾಜಕಾರಣದಲ್ಲಿ ಅವಕಾಶದ ಕುರಿತು ಮಾತನಾಡಿದ ಡಿ.ಕೆ.ಶಿ, “ಸುಮಾರು ಶೇ.80ರಷ್ಟು ಜನ ದುಡಿಯುತ್ತಲೇ ಇದ್ದಾರೆ. ಶೇ. 20ರಷ್ಟು ಜನರಿಗೆ ಮಾತ್ರ ಸಣ್ಣಪುಟ್ಟ ಸ್ಥಾನಮಾನ ಸಿಕ್ಕಿದೆ. ನನಗೂ 63 ವರ್ಷವಾಯಿತು. ಹೊಸಬರು ಬರಬೇಕು. ಐದು ಪಾಲಿಕೆಗಳು ಮಾಡಿದ ಕಾರಣಕ್ಕೆ ಬೆಂಗಳೂರಿನಲ್ಲಿ ಹೊಸದಾಗಿ 500ಕ್ಕೂ ಹೆಚ್ಚು ನಾಯಕರು ಬೆಳಕಿಗೆ ಬರಲಿದ್ದಾರೆ,” ಎಂದರು.
- ಆರ್‌ಎಸ್‌ಎಸ್ ವಿವಾದ: ಜಾತ್ಯಾತೀತ ತತ್ವದಲ್ಲಿ ಬೆಳೆದವನು. ಸದನದಲ್ಲಿ ಆರ್‌ಎಸ್‌ಎಸ್ ಬಗ್ಗೆ ತಿಳಿದಿದೆ ಎಂದು ಹೇಳಿದೆ ಅಷ್ಟೇ, ಅದನ್ನೇ ದೊಡ್ಡದಾಗಿ ಬಿಂಬಿಸಲಾಯಿತು. ಕಾರ್ಯಕರ್ತರಿಗೆ ನೋವಾಗಬಾರದು ಎಂದು ನಾನು ಏನೂ ಮಾತನಾಡಲಿಲ್ಲ ಎಂದರು.
- ವಿದ್ಯಾರ್ಥಿ ರಾಜಕೀಯ: ಮೌಂಟ್ ಕಾರ್ಮೆಲ್ ಶಾಲಾ ಚುನಾವಣೆಯಲ್ಲಿ ಗೆದ್ದಿದ್ದರೂ ನನಗೆ ಪ್ರತ್ಯೇಕವಾಗಿ ಕ್ರೀಡಾ ಕಾರ್ಯದರ್ಶಿ ಹುದ್ದೆ ನೀಡಲಾಯಿತು ಎಂದು ತಮ್ಮ ರಾಜಕೀಯದ ಆರಂಭದ ದಿನಗಳನ್ನು ನೆನಪಿಸಿಕೊಂಡರು.