
ಬೆಂಗಳೂರಿನಲ್ಲಿ ಶಾಕ್ ಆಗಿಸುವ ಘಟನೆಯೊಂದು ಬೆಳಕಿಗೆ ಬಂದಿದೆ, ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿ ಮಾತ್ರೆ ಕೇಳಿದ ಸೊಸೆಯ ಕುರಿತ ಪ್ರಕರಣವಿದು. ಬೆಂಗಳೂರಿನ ವೈದ್ಯ ಸುನೀಲ್ ಕುಮಾರ್ ಅವರ ವಾಟ್ಸಾಪ್ ಸಂಪರ್ಕಿಸಿ ಮಹಿಳೆಯೊಬ್ಬಳು, “ನನ್ನ ಅತ್ತೆಯಿಂದ ಹಿಂಸೆ ಆಗುತ್ತಿದೆ, ಅವರಿಗೆ ತುಂಬಾ ವಯಸ್ಸಾಗಿದೆ. ಹೇಗೆ ಸಾಯಿಸಬಹುದು?” ಎಂದು ಕೇಳಿದ್ದಾಳೆ.
ಇಷ್ಟೇ ಅಲ್ಲ, “ಒಂದೆರಡು ಮಾತ್ರೆ ಕೊಟ್ಟರೆ ಸಾಕಾ?” ಎಂದು ತಲೆತಗ್ಗಿಸುವ ಸಂದೇಶವನ್ನೂ ಬರೆದಿದ್ದಾಳೆ. ಈ ಅಮಾನವೀಯ ಸಂದೇಶಕ್ಕೆ ವೈದ್ಯರು ತಕ್ಷಣ ಪ್ರತಿಕ್ರಿಯಿಸಿ, “ನಾವು ಜೀವ ಉಳಿಸುವ ಜನ, ಕೊಲ್ಲೋ ಕೆಲಸ ಮಾಡೋಲ್ಲ” ಎಂದು ತಿರಸ್ಕರಿಸಿದರು. ತಕ್ಷಣ ಆ ಮಹಿಳೆ ಸಂದೇಶವನ್ನು ಡಿಲೀಟ್ ಮಾಡಿ, ವೈದ್ಯರ ನಂಬರ್ ಬ್ಲಾಕ್ ಮಾಡಿದ್ದಾಳೆ.
ಆದರೆ, ಮೆಸೇಜ್ ಡಿಲೀಟ್ ಮಾಡುವ ಮುನ್ನವೇ ವೈದ್ಯ ಸುನೀಲ್ ಕುಮಾರ್ ಅವರು ಸ್ಕ್ರೀನ್ ಶಾಟ್ ತೆಗೆದಿದ್ದರು.ಇದನ್ನೇ ಆಧಾರವಿಟ್ಟು ಅವರು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಮಹಿಳೆಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.