
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ದರ್ಶನ್ ಸೇರಿದಂತೆ ಏಳು ಮಂದಿ ಆರೋಪಿಗಳ ಜಾಮೀನು ಭವಿಷ್ಯ ಇಂದು ಸುಪ್ರೀಂಕೋರ್ಟ್‌ನಲ್ಲಿ ನಿರ್ಧಾರವಾಗಲಿದೆ. ಹೈಕೋರ್ಟ್ ನೀಡಿದ್ದ ಜಾಮೀನನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ ಇಂದಿನ ವಿಚಾರಣೆ ತೀವ್ರ ಕುತೂಹಲ ಕೆರಳಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಟ ದರ್ಶನ್ ಮತ್ತು ಇತರ ಆರು ಆರೋಪಿಗಳಿಗೆ ಡಿಸೆಂಬರ್ 2024ರಲ್ಲಿ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ, ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.
ಈ ಹಿಂದೆ ವಿಚಾರಣೆಯನ್ನು ಮುಂದೂಡಿದ್ದ ಸುಪ್ರೀಂಕೋರ್ಟ್, ಇಂದು (ಜುಲೈ 17, 2025) ಮತ್ತೊಮ್ಮೆ ಅರ್ಜಿಯ ವಿಚಾರಣೆ ನಡೆಸಲಿದೆ. ಕೊಲೆ ಆರೋಪದಡಿ ಜೈಲುಪಾಲಾಗಿದ್ದ ನಟ ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಈ ದಿನ ಅತ್ಯಂತ ಮಹತ್ವದ್ದಾಗಿದ್ದು, ಅವರ ಜಾಮೀನು ಮುಂದುವರೆಯುವುದೇ ಅಥವಾ ರದ್ದಾಗುವುದೇ ಎಂಬುದು ಸ್ಪಷ್ಟವಾಗಲಿದೆ. ಪ್ರಕರಣದ ಗಂಭೀರತೆ ಮತ್ತು ಸಾರ್ವಜನಿಕ ಗಮನವನ್ನು ಪರಿಗಣಿಸಿ, ನ್ಯಾಯಾಲಯದ ತೀರ್ಪನ್ನು ಕುತೂಹಲದಿಂದ ನಿರೀಕ್ಷಿಸಲಾಗುತ್ತಿದೆ.