
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ನಟ ದರ್ಶನ್ ಮತ್ತೊಮ್ಮೆ ಜೈಲು ಸೇರಿದ್ದು, ಇದರ ಪರಿಣಾಮವಾಗಿ ಅವರ ಬಹುನಿರೀಕ್ಷಿತ ‘ದಿ ಡೆವಿಲ್’ (The Devil) ಸಿನಿಮಾದ ಹಾಡು ಬಿಡುಗಡೆಯನ್ನು ಮುಂದೂಡಲಾಗಿದೆ. ಈ ಬೆಳವಣಿಗೆ ದರ್ಶನ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ದರ್ಶನ್ ಮತ್ತು ಇತರ ಏಳು ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಗಸ್ಟ್ 15 ರಂದು ಬೆಳಗ್ಗೆ 10:05 ಕ್ಕೆ ‘ಇದ್ರೆ ನೆಮ್ದಿಯಾಗ್ ಇರ್ಬೇಕು’ ಎಂಬ ಹಾಡು ಬಿಡುಗಡೆಯಾಗಬೇಕಿತ್ತು. ಆದರೆ, “ಅನಿವಾರ್ಯ ಕಾರಣಗಳಿಂದ” ಹಾಡಿನ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ.
ಮಿಲನಾ ಪ್ರಕಾಶ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಮತ್ತು ಡಬ್ಬಿಂಗ್ ಕೆಲಸಗಳು ಈಗಾಗಲೇ ಮುಗಿದಿದ್ದು, ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.