
ಬೆಂಗಳೂರು: ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು ಏಳು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗ ಹೊಸ ಬೆಳವಣಿಗೆಗಳು ನಡೆದಿವೆ. ದರ್ಶನ್ ಜೈಲಿನಲ್ಲಿ ಹೆಚ್ಚುವರಿ ಸೌಲಭ್ಯಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರೆ, ಆರೋಪಿ ಸಂಖ್ಯೆ 1 ಪವಿತ್ರಾ ಗೌಡ ಜಾಮೀನು ಕೋರಿ ಅರ್ಜಿ ಹಾಕಿದ್ದಾರೆ. ಈ ಎರಡೂ ಅರ್ಜಿಗಳ ವಿಚಾರಣೆಯನ್ನು ಬೆಂಗಳೂರಿನ ಸೆಷನ್ಸ್ ಕೋರ್ಟ್ ಸೆಪ್ಟೆಂಬರ್ 2ಕ್ಕೆ ಮುಂದೂಡಿದೆ.
ದರ್ಶನ್ ಅರ್ಜಿಯಲ್ಲಿ ಏನಿದೆ?
ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ರದ್ದಾದ ನಂತರ ದರ್ಶನ್‌ಗೆ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ನೀಡದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅದರಂತೆ, ದರ್ಶನ್‌ಗೆ ಸಾಮಾನ್ಯ ಕೈದಿಯಂತೆಯೇ ಕೇವಲ ಒಂದು ಬೆಡ್‌ಶೀಟ್ ನೀಡಲಾಗಿದೆ. ಆದರೆ, ದರ್ಶನ್ ಪರ ವಕೀಲ ಸುನೀಲ್‌ಕುಮಾರ್ ಅವರು ಹೆಚ್ಚುವರಿ ದಿಂಬು ಮತ್ತು ಹಾಸಿಗೆಗಾಗಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
“ನಾವು ದರ್ಶನ್‌ಗೆ ಮನೆ ಊಟ ಅಥವಾ ಫೈವ್ ಸ್ಟಾರ್ ಸೌಲಭ್ಯಗಳನ್ನು ಕೇಳುತ್ತಿಲ್ಲ. ಜೈಲು ನಿಯಮದಂತೆ ಅವರಿಗೆ ಬೆಡ್‌ಶೀಟ್ ಮತ್ತು ದಿಂಬು ಒದಗಿಸುವಂತೆ ಕೋರುತ್ತಿದ್ದೇವೆ,” ಎಂದು ವಾದ ಮಂಡಿಸಿದ್ದಾರೆ.
ಇದೇ ವೇಳೆ, ದರ್ಶನ್‌ರನ್ನು ಬಳ್ಳಾರಿಗೆ ಸ್ಥಳಾಂತರಿಸುವ ಸಾಧ್ಯತೆಗಳ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದರ್ಶನ್ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಬಳ್ಳಾರಿಗೆ ಸ್ಥಳಾಂತರ ಮಾಡುವುದು ಸರಿಯಲ್ಲ ಎಂದು ಮನವಿ ಮಾಡಿದ್ದಾರೆ. ಈ ಎರಡೂ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಸೆಪ್ಟೆಂಬರ್ 2ಕ್ಕೆ ಮುಂದೂಡಿದೆ.
ಪವಿತ್ರಾ ಗೌಡ ಜಾಮೀನು ಅರ್ಜಿ
ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪವಿತ್ರಾ ಗೌಡ ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಪವಿತ್ರಾ ಪರ ವಾದ ಮಂಡಿಸಿದ ವಕೀಲ ಬಾಲನ್, ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸದೆ, ದೋಷಾರೋಪಣಾ ಪಟ್ಟಿಯಲ್ಲಿರುವ ತಾಂತ್ರಿಕ ಲೋಪವನ್ನು ಎತ್ತಿ ತೋರಿಸಿದ್ದಾರೆ.
“ಆರೋಪಪಟ್ಟಿಯನ್ನು ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತೆ) ಬದಲಿಗೆ ಸಿಆರ್‌ಪಿಸಿ (ಕ್ರಿಮಿನಲ್ ಪ್ರೊಸೀಜರ್ ಕೋಡ್) ಅಡಿಯಲ್ಲಿ ಸಲ್ಲಿಸಲಾಗಿದೆ. ಇದು ಕಾನೂನು ಬಾಹಿರವಾದ್ದರಿಂದ ನಮ್ಮ ಕಕ್ಷಿದಾರರು ಕಡ್ಡಾಯ ಜಾಮೀನಿಗೆ ಅರ್ಹರು,” ಎಂದು ವಾದಿಸಿದ್ದಾರೆ. ಆದರೆ, ಪ್ರತಿವಾದಿ ವಕೀಲ ಸಚಿನ್ ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜಾಮೀನು ರದ್ದು ಮಾಡದಂತೆ ಮನವಿ ಮಾಡಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನೂ ನ್ಯಾಯಾಲಯ ಸೆಪ್ಟೆಂಬರ್ 2ಕ್ಕೆ ಮುಂದೂಡಿದೆ.