
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಖ್ಯಾತ ನಟ ದರ್ಶನ್ ಅವರ ಬೆನ್ನುನೋವಿನ ಚಿಕಿತ್ಸೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಹೊರಗಿನ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಸಿ.ವಿ.ರಾಮನ್ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ತಂಡವು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ವರದಿ ಸಲ್ಲಿಸಿದೆ.
ತಮ್ಮ ಬೆನ್ನುನೋವಿನ ಸಮಸ್ಯೆ ತೀವ್ರವಾಗಿದ್ದು, ನಿಂತುಕೊಳ್ಳಲು ಅಥವಾ ಕುಳಿತುಕೊಳ್ಳಲು ಕಷ್ಟವಾಗುತ್ತಿದೆ ಎಂದು ನಟ ದರ್ಶನ್ ಅವರು ನ್ಯಾಯಾಲಯದ ಮುಂದೆ ವಿಜ್ಞಾಪನೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ, ಸೂಕ್ತ ವೈದ್ಯಕೀಯ ನೆರವು ಒದಗಿಸುವಂತೆ ನ್ಯಾಯಾಲಯವು ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ನ್ಯಾಯಾಲಯದ ಆದೇಶದನ್ವಯ, ಸಿ.ವಿ.ರಾಮನ್ ಆಸ್ಪತ್ರೆಯ ನಾಲ್ಕು ಮಂದಿ ವೈದ್ಯರು ದರ್ಶನ್‌ಗೆ ‘ಫಿಸಿಯೋಥೆರಪಿ’ ಚಿಕಿತ್ಸೆಯನ್ನು ಪ್ರಾರಂಭಿಸಿದ್ದರು. ವಾರದಲ್ಲಿ 2 ರಿಂದ 3 ಬಾರಿ ವೈದ್ಯರ ತಂಡವು ಚಿಕಿತ್ಸೆಗಾಗಿ ಜೈಲಿಗೆ ಭೇಟಿ ನೀಡುತ್ತಿತ್ತು.
ಆದರೆ, ಚಿಕಿತ್ಸೆ ಪ್ರಾರಂಭವಾದ ಮೊದಲ ವಾರದಲ್ಲೇ ವೈದ್ಯರ ತಂಡಕ್ಕೆ ದರ್ಶನ್ ಅವರ ಬೆನ್ನುನೋವಿನ ತೀವ್ರತೆ ಬಗ್ಗೆ ಸ್ಪಷ್ಟ ಚಿತ್ರಣ ದೊರೆತಿದೆ ಎನ್ನಲಾಗಿದೆ. ದರ್ಶನ್ ಅವರಲ್ಲಿ ತೀವ್ರ ಬೆನ್ನುನೋವಿನ ಲಕ್ಷಣಗಳು ಕಂಡುಬಂದಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಿರುವ ವೈದ್ಯರು, ತಕ್ಷಣವೇ ಫಿಸಿಯೋಥೆರಪಿ ಚಿಕಿತ್ಸೆಯನ್ನು ಸ್ಥಗಿತಗೊಳಿಸಿದ್ದಾರೆ. ಪ್ರಸ್ತುತ ನಟ ದರ್ಶನ್‌ಗೆ ಯಾವುದೇ ಬಾಹ್ಯ ಫಿಸಿಯೋಥೆರಪಿಯ ಅವಶ್ಯಕತೆ ಇಲ್ಲ. ಒಂದು ವೇಳೆ ಭವಿಷ್ಯದಲ್ಲಿ ಮತ್ತೆ ನೋವು ಕಾಣಿಸಿಕೊಂಡರೆ, ಜೈಲಿನಲ್ಲೇ ಲಭ್ಯವಿರುವ ವೈದ್ಯಕೀಯ ಸಿಬ್ಬಂದಿಯಿಂದಲೇ ಚಿಕಿತ್ಸೆ ಮುಂದುವರಿಸಬಹುದು. ಹೊರಗಿನ ವೈದ್ಯರ ವಿಶೇಷ ಚಿಕಿತ್ಸೆಯ ಅವಶ್ಯಕತೆ ಸದ್ಯಕ್ಕೆ ಇಲ್ಲ ಎಂದು ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯು ನ್ಯಾಯಾಲಯದ ಮುಂದಿನ ಕ್ರಮಗಳಿಗೆ ಪ್ರಮುಖ ಆಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.



































