
ಪುಣೆ: ಮಹಾರಾಷ್ಟ್ರದ ಉಲ್ಲಾಸ್‌ನಗರದಲ್ಲಿ 2.5 ವರ್ಷದ ಬಾಲಕಿಗೆ ಬೇಸಿಗೆ ಶಿಬಿರದ ವೇಳೆ ನೃತ್ಯ ಶಿಕ್ಷಕನೇ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿತ ಶಿಕ್ಷಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಉಲ್ಲಾಸ್‌ನಗರದ ಶಿಬಿರದಲ್ಲಿದ್ದ ಮಗುವಿಗೆ ಶಿಬಿರದಿಂದ ಮನೆಗೆ ವಾಪಸಾದ ಬಳಿಕ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಇದರಿಂದ ಆತಂಕಗೊಂಡ ಪೋಷಕರು ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ . ವೈದ್ಯಕೀಯ ತಪಾಸಣೆಯಲ್ಲಿ ಬಾಲಕಿ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿರುವುದು ಸ್ಪಷ್ಟವಾಗಿದೆ.
ಈ ಕುರಿತು ಮಗುವಿನೊಂದಿಗೆ ಮಾತುಕತೆ ನಡೆಸಿದಾಗ, ನೃತ್ಯ ಶಿಕ್ಷಕ ಈ ಕೃತ್ಯ ಎಸಗಿದ್ದಾನೆ ಎಂಬುದು ಪೋಷಕರಿಗೆ ಗೊತ್ತಾಗಿದೆ. ತಕ್ಷಣವೇ ಅವರು ವಿಠಲವಾಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪೊಲೀಸರು ಉಲ್ಲಾಸ್‌ನಗರದ ಡಿಸಿಪಿ ಸಚಿನ್ ಗೋರ್ ಮತ್ತು ಹಿರಿಯ ಅಧಿಕಾರಿ ಅನಿಲ್ ಪಡ್ವಾಲ್ ಅವರ ಮಾರ್ಗದರ್ಶನದಲ್ಲಿ ಆರೋಪಿಯನ್ನು ಆತನ ಮನೆಯಿಂದ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಈ ಪ್ರಕರಣವು ಶಿಬಿರಗಳಲ್ಲಿ ಭಾಗವಹಿಸುತ್ತಿರುವ ಪುಟಾಣಿ ಮಕ್ಕಳ ಸುರಕ್ಷತೆಗೆ ಗಂಭೀರ ಎಚ್ಚರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ಹೆಚ್ಚು ನಿಗಾ ವಹಿಸಲು ತಜ್ಞರು ಸಲಹೆ ನೀಡುತ್ತಿದ್ದಾರೆ.