
ಮಂಗಳೂರು : ಕಾರು, ಬೈಕ್, ಫ್ಲಾಟ್ ಮತ್ತು ಸೈಟ್‌ಗಳ ಆಮಿಷ ತೋರಿಸಿ ಸಾವಿರಾರು ಜನರಿಗೆ ಕೋಟಿಗಟ್ಟಲೆ ಹಣ ವಂಚಿಸಿದ್ದ ನಾಲ್ವರು ಪ್ರಮುಖ ವಂಚಕರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ‘ಲಕ್ಕಿ ಸ್ಕೀಂ’ಗಳ ಹೆಸರಿನಲ್ಲಿ ಸಾರ್ವಜನಿಕರ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಈ ವಂಚಕರ ಮುಖವಾಡ ಇದೀಗ ಬಯಲಾಗಿದೆ.
₹14 ಕೋಟಿಗೂ ಅಧಿಕ ಹಣ ವಂಚನೆ
ಬ್ರಹ್ಮಾವರದಲ್ಲಿರುವ ‘ನ್ಯೂ ಇಂಡಿಯಾ ರಾಯಲ್ ಸ್ಕೀಮ್’ ಮತ್ತು ‘ಗ್ರೀನ್ ಲೈಟ್ ಲಕ್ಕಿ ಸ್ಕೀಮ್’ ಹೆಸರಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸುಮಾರು 13,000 ಜನರಿಗೆ ₹10 ಕೋಟಿಗೂ ಹೆಚ್ಚು ವಂಚನೆ ಮಾಡಲಾಗಿತ್ತು. ಈ ಸಂಬಂಧ ಭುಜಂಗ ಎ. ಪೂಜಾರಿ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಮೊಹಮ್ಮದ್ ಅಶ್ರಫ್ ಮತ್ತು ಮೊಹಮ್ಮದ್ ಹನೀಫ್ ಎಂಬುವವರನ್ನು ಬಂಧಿಸಿದ್ದಾರೆ.
ಅದೇ ರೀತಿ, ‘ನ್ಯೂ ಶೈನ್ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ಶಿವಪ್ರಸಾದ್ ಎಂಬುವವರು ನೀಡಿದ ದೂರಿನ ಮೇರೆಗೆ, ಸುಮಾರು 3,000 ಜನರಿಗೆ ₹4 ಕೋಟಿಗೂ ಹೆಚ್ಚು ವಂಚನೆ ಮಾಡಿದ್ದ ಆರೋಪದಲ್ಲಿ ಅಹಮ್ಮದ್ ಖುರೇಷಿ ಮತ್ತು ನಝೀರ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರಿಂದ ಆಸ್ತಿ-ಪಾಸ್ತಿ ಜಪ್ತಿ
ಪೊಲೀಸರು ಆರೋಪಿಗಳ ಕಚೇರಿ ಹಾಗೂ ಮನೆಗಳಿಂದ ವಂಚನೆಗೆ ಬಳಸಲಾದ ಕಂಪ್ಯೂಟರ್‌ಗಳು, ಲಕ್ಕಿ ಡ್ರಾ ಪೆಟ್ಟಿಗೆಗಳು ಮತ್ತು ರಿಜಿಸ್ಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ವಂಚನೆ ಹಣದಲ್ಲಿ ಖರೀದಿಸಿದ್ದ ಮನೆಗಳು, ನಿವೇಶನ, ವಾಹನಗಳು ಮತ್ತು ಚಿನ್ನಾಭರಣಗಳನ್ನು ಜಪ್ತಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪೊಲೀಸರು ಪತ್ರ ವ್ಯವಹಾರ ನಡೆಸಿದ್ದಾರೆ. ಈ ಮಹತ್ವದ ಕಾರ್ಯಾಚರಣೆಯನ್ನು ಸುರತ್ಕಲ್ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ನಡೆಸಲಾಗಿದೆ.
ಸಾರ್ವಜನಿಕರು ಮತ್ತು ಏಜೆಂಟರು ಸಂಬಂಧಿತ ದಾಖಲಾತಿಗಳೊಂದಿಗೆ ಠಾಣೆಗೆ ಬಂದು ಹೇಳಿಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.