
ಮಂಗಳೂರು : ಉದ್ಯಮಿಗಳಿಗೆ ಬಹುಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರೋಶನ್ ಸಲ್ದಾನ್ಹಾ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಮೂಲತಃ ಜಪ್ಪಿನಮೊಗರು ಬಜಾಲ್‌ನ ಬೊಲ್ಲಗುಡ್ಡದ ನಿವಾಸಿಯಾಗಿರುವ ಈತ, ಅತ್ಯಂತ ಸಾಮಾನ್ಯ ಹಿನ್ನೆಲೆಯಿಂದ ಬಂದು ಏಕಾಏಕಿ ಶ್ರೀಮಂತನಾಗಿರುವ ಬಗ್ಗೆ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಆರಂಭದಿಂದಲೇ ಅಪರಾಧ ಪ್ರವೃತ್ತಿ
ರೋಶನ್ ಚಿಕ್ಕವನಾಗಿದ್ದಾಗಲೇ ಸಹಪಾಠಿ ವಿದ್ಯಾರ್ಥಿನಿಯ ಸರ ಕದ್ದು ಕುಖ್ಯಾತಿ ಗಳಿಸಿದ್ದ. ಸುಮಾರು 10-12 ವರ್ಷಗಳ ಹಿಂದಿನವರೆಗೂ ಬೊಲ್ಲಗುಡ್ಡದಲ್ಲಿ ಸಾರಣೆ ಇಲ್ಲದ ಹೆಂಚಿನ ಮನೆಯಲ್ಲಿ ಆತನ ಹೆತ್ತವರು ವಾಸಿಸುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಊಟ-ತಿಂಡಿ ಮಾಡಿ, ಹೆತ್ತವರು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಇಂತಹ ತೀರಾ ಸಾಮಾನ್ಯ ಕುಟುಂಬದಿಂದ ಬಂದ ರೋಶನ್, ಏಕಾಏಕಿ ಕೋಟ್ಯಾಧಿಪತಿಯಾಗಿರುವುದನ್ನು ನೋಡಿ ನೆರೆಹೊರೆಯವರು ದಂಗಾಗಿದ್ದಾರೆ.
ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದ ರೋಶನ್, ವಿವಿಧೆಡೆ ಕೆಲಸ ಮಾಡುತ್ತಿದ್ದ. ನಂತರ ಮುಂಬೈಗೆ ತೆರಳಿದ ಅಲ್ಲಿಯೇ ವಂಚನೆ ದಂಧೆ ಶುರುಮಾಡಿದ. ಬಳಿಕ ಐಷಾರಾಮಿ ಜೀವನ ನಡೆಸಲು ಆರಂಭಿಸಿದ. ಪ್ರಸ್ತುತ ಕೋಟಿ ರೂಪಾಯಿ ಬೆಲೆಬಾಳುವ ಮೂರ್ನಾಲ್ಕು ಐಷಾರಾಮಿ ಕಾರುಗಳನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಕುಟುಂಬದಿಂದಲೂ ದೂರ?
ಹೆತ್ತವರ ಇಬ್ಬರು ಮಕ್ಕಳಲ್ಲಿ ರೋಶನ್ ಹಿರಿಯನಾಗಿದ್ದು, ಓರ್ವ ತಂಗಿ ಇದ್ದಾಳೆ. ಪ್ರಸ್ತುತ ತಂಗಿಗೆ ಮದುವೆಯಾಗಿದ್ದು, ಕೆಲವು ವರ್ಷಗಳ ಹಿಂದಿನವರೆಗೂ ಆಕೆಯೇ ಹೆತ್ತವರನ್ನು ನೋಡಿಕೊಳ್ಳುತ್ತಿದ್ದಳು. ಆದರೆ ರೋಶನ್, ತಂಗಿಯನ್ನೂ ಮನೆಯಿಂದ ಹೊರಗೆ ಹಾಕಿದ್ದಾನೆ ಎಂದು ಸ್ಥಳೀಯರು ಹೇಳುತ್ತಾರೆ.
ಐಷಾರಾಮಿ ಜೀವನದ ಪ್ರದರ್ಶನ
ಕೆಲವು ವರ್ಷಗಳ ಹಿಂದೆ, ತನ್ನ ಶ್ರೀಮಂತಿಕೆಯನ್ನು ಪ್ರದರ್ಶಿಸಲು, ರೋಶನ್ ತನ್ನ ಮಗುವಿನ ಹುಟ್ಟುಹಬ್ಬವನ್ನು ಮನೆಯ ಪಕ್ಕದ ಜಮೀನಿನಲ್ಲಿ ಪೆಂಡಾಲ್ ಹಾಕಿ ಅದ್ಧೂರಿಯಾಗಿ ಆಯೋಜಿಸಿದ್ದ. ಈ ಕಾರ್ಯಕ್ರಮದಲ್ಲಿ ಕೆಲವು ಗಣ್ಯರು ಭಾಗವಹಿಸಿದ್ದು, ಊಟೋಪಚಾರ ಮತ್ತು ಉಡುಗೊರೆಗಳಿಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿದ್ದ ಎಂದು ಸ್ಥಳೀಯರು ಹೇಳುತ್ತಾರೆ. ರೋಶನ್‌ನ ಪತ್ನಿ ಪಾಂಡೇಶ್ವರ ಮೂಲದವಳಾಗಿದ್ದು, ಆಕೆಯೂ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಿದ್ದಳು. ಪ್ರಸ್ತುತ, ರೋಶನ್‌ನ ಪತ್ನಿ ಮತ್ತು ಮಗು ಚೆನ್ನೈನಲ್ಲಿದ್ದಾರೆ ಎಂದು ವರದಿಯಾಗಿದೆ.
ಸಾರ್ವಜನಿಕರಿಗೆ ಕಿರಿಕಿರಿ
ರೋಶನ್ ಮನೆಯ ಬಳಿ ಇರುವ ವಿದ್ಯುತ್ ಕಂಬಕ್ಕೆ ಸಾರ್ವಜನಿಕ ಬೀದಿ ದೀಪ ಅಳವಡಿಸಲು ಆತ ಬಿಡುತ್ತಿರಲಿಲ್ಲ. ತನ್ನ ವ್ಯವಹಾರಗಳಿಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದ. ಇದರಿಂದಾಗಿ ಆತನ ಮನೆಯ ಪಕ್ಕದ ಪ್ರದೇಶ ಯಾವಾಗಲೂ ಕತ್ತಲಿನಿಂದ ಕೂಡಿರುತ್ತದೆ. ಆದರೆ, ಅದೇ ಸಾರ್ವಜನಿಕ ರಸ್ತೆಯಲ್ಲಿ ತನ್ನ ಸಿಸಿಟಿವಿ ಕ್ಯಾಮೆರಾದ ಕಂಬವನ್ನು ಅಳವಡಿಸಿಕೊಂಡಿದ್ದಾನೆ ಎಂದು ಸ್ಥಳೀಯರು ಆಪಾದಿಸಿದ್ದಾರೆ.