
ಬೆಂಗಳೂರು : ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಕುರಿತಾಗಿ ನ್ಯಾಯಾಲಯದ ತಡೆಯಾಜ್ಞೆಯನ್ನು ಉಲ್ಲಂಘಿಸಿ ಮತ್ತೊಂದು ವಿವಾದಿತ ವಿಡಿಯೋ ಪ್ರಕಟಿಸಿದ ಆರೋಪದ ಮೇರೆಗೆ ‘ದೂತ’ ಯೂಟ್ಯೂಬ್ ಚಾನೆಲ್‌ನ ಎಂಡಿ ಸಮೀರ್ ವಿರುದ್ಧ ₹10 ಕೋಟಿ ಮಾನನಷ್ಟದ ದಾವೆ ದಾಖಲಿಸಲಾಗಿದೆ.
ಈ ಮೊಕದ್ದಮೆಯನ್ನು ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮತ್ತು ಡಿ. ನಿಶ್ಚಲ್ ಅವರು ಸಲ್ಲಿಸಿದ್ದಾರೆ. ಈ ಮೊದಲು ನ್ಯಾಯಾಲಯ ಧರ್ಮಸ್ಥಳದ ಕುರಿತು ವಿಡಿಯೋ ಮಾಡಲು ಅಥವಾ ಹಳೆ ವಿಡಿಯೋ ಮುಂದುವರೆಸಲು ನಿರ್ಬಂಧಾಜ್ಞೆ ಹೊರಡಿಸಿತ್ತು. ಆದರೂ, ‘ಧರ್ಮಸ್ಥಳ ವಿಲೇಜ್ ಹಾರರ್ ಪಾರ್ಟ್–2 / ಸಾಕ್ಷಿ ನಾಶ / ಸೌಜನ್ಯ ಕೇಸ್’ ಎಂಬ ಶೀರ್ಷಿಕೆಯಲ್ಲಿ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಲಾಗಿದೆ ಎಂದು ದೂರಿದೆ.
ದಾವೆಯಲ್ಲಿ, ಈ ವಿಡಿಯೋ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆ ಮತ್ತು ಧರ್ಮಸ್ಥಳದ ಪ್ರತಿಷ್ಠೆಗೆ ಧಕ್ಕೆಯುಂಟುಮಾಡಿದೆ. ತಕ್ಷಣ ಈ ವಿಡಿಯೋವನ್ನು ಚಾನೆಲ್‌ನಿಂದ ತೆಗೆದುಹಾಕಬೇಕು ಹಾಗೂ ಶೀಘ್ರದಲ್ಲೇ ಮಧ್ಯಂತರ ಪರಿಹಾರವಾಗಿ ತಾತ್ಕಾಲಿಕ ನಿರ್ಬಂಧ ವಿಧಿಸಬೇಕು ಎಂದು ಕೋರಲಾಗಿದೆ.