
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹರಾವರಿ ಗ್ರಾಮದಲ್ಲಿ ಮಾನವೀಯತೆಯೇ ಹೆದರುವಂತಹ ಘಟನೆ ನಡೆದಿದೆ. ಕಳೆದ ಬುಧವಾರ (ಮೇ 28) ರಂದು, ಎರಡು ದಿನದ ಹೆಣ್ಣುಮಗುವನ್ನು ಮಾರಾಟ ಮಾಡಿದ ರತ್ನ-ಸದಾನಂದ ದಂಪತಿಯನ್ನು ಎನ್.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.
ಈ ದಂಪತಿಗೆ ಸಹಕಾರ ನೀಡಿದ್ದ ನಿವೃತ್ತ ನರ್ಸ್ ಕುಸುಮ ಕೂಡಾ ಪೊಲೀಸರ ಅತಿಥಿಯಾಗಿದ್ದಾರೆ. ತನಿಖೆಯ ಪ್ರಕಾರ, ದಂಪತಿ ತಮ್ಮ ಮಗುವನ್ನು ಚಿಕ್ಕಮಗಳೂರಿನ ಕೊಪ್ಪ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ನರ್ಸ್ ಆಗಿದ್ದ ಕುಸುಮನ ಸಹಾಯದಿಂದ ಮಗುವನ್ನು ಕಾರ್ಕಳದ ರಾಘವೇಂದ್ರ ಎಂಬುವರಿಗೆ ₹1 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ.
ಈ ಕುರಿತಂತೆ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ. ಸದ್ಯದಲ್ಲಿ ಮಗು ಮಕ್ಕಳ ಕಲ್ಯಾಣ ಸಮಿತಿಯ ವಶದಲ್ಲಿದೆ. ರತ್ನ-ಸದಾನಂದ ದಂಪತಿಗೆ ಮೂರು ಮಕ್ಕಳಿದ್ದು, ಅವರಲ್ಲಿ ಇಬ್ಬರನ್ನು ಈಗಾಗಲೇ ಮಾರಾಟ ಮಾಡಿರುವ ಶಂಕೆಯೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.