
ಉಡುಪಿ: ಕರಾವಳಿಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಉಡುಪಿ, ಮತ್ತು ಕೊಲ್ಲೂರು ಬಗ್ಗೆ ಅವಹೇಳನಕಾರಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಕೇರಳದ ಇಬ್ಬರು ವ್ಯಕ್ತಿಗಳ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರಿಯಡ್ಕದ ಬೆಳ್ಳರ್ಪಾಡಿ ನಿವಾಸಿ ಶ್ರೀಕುಮಾರ್ ಅವರು ನೀಡಿದ ದೂರಿನನ್ವಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಯೂಟ್ಯೂಬರ್‌ಗಳ ಹೇಳಿಕೆಗಳೇನು?
ಮಲ್ಲು ಮಾರ್ಟ್ ಟ್ರಾವೆಲರ್ ಮತ್ತು ಮಾನಫ್ ಎಂಬ ವ್ಯಕ್ತಿಗಳು ತಮ್ಮ ಫೇಸ್‌ಬುಕ್ ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ ಈ ವಿವಾದಾತ್ಮಕ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋಗಳಲ್ಲಿ, “ಕುಟುಂಬ ಸಹಿತರಾಗಿ ಕರಾವಳಿಯ ಧಾರ್ಮಿಕ ಕ್ಷೇತ್ರಗಳಿಗೆ ಹೆಣ್ಣು ಮಕ್ಕಳೊಂದಿಗೆ ಹೋಗಬೇಡಿ. ಹೆಣ್ಣು ಮಕ್ಕಳು ಸುರಕ್ಷಿತವಲ್ಲ, ಕೊಡಚಾದ್ರಿ ಸಹಿತ ಎಲ್ಲ ಕ್ಷೇತ್ರಗಳಲ್ಲಿಯೂ ಇಂತಹ ಪ್ರಕರಣಗಳು ನಡೆದಿರಬಹುದು” ಎಂದು ಅವಹೇಳನಕಾರಿಯಾಗಿ ಹೇಳಿಕೆಗಳನ್ನು ನೀಡಿದ್ದರು.
ಈ ಹೇಳಿಕೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹವು ಎಂದು ದೂರಿನಲ್ಲಿ ಸ್ಪಷ್ಟಪಡಿಸಲಾಗಿದ್ದು, ಈ ಬಗ್ಗೆ ಪೊಲೀಸರು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಗಿದೆ.