
ಕೊಪ್ಪಳ : ಕೊಪ್ಪಳದಲ್ಲಿ ವಿಶಿಷ್ಟ ಪ್ರೇಮ ಕಥೆಯೊಂದು ಬೆಳಕಿಗೆ ಬಂದಿದೆ. ಮದುವೆಯಾದ ಕೇವಲ 15 ದಿನಗಳಲ್ಲಿ ಲೇಬರ್ ಕಂಟ್ರ್ಯಾಕ್ಟರ್ ಮಗಳೊಬ್ಬಳು, ತಾನು ಪ್ರೀತಿಸಿದ ಗಾರೆ ಕೆಲಸದಾತನೊಂದಿಗೆ ಓಡಿಹೋಗಿ ಕೊಪ್ಪಳಕ್ಕೆ ಬಂದಿದ್ದಾಳೆ.
ಆಂಧ್ರಪ್ರದೇಶ ಮೂಲದ ಗುತ್ತಿಗೆದಾರರ ಪುತ್ರಿಯೊಬ್ಬಳು, ಬೆಂಗಳೂರಿನಲ್ಲಿ ತನ್ನ ತಂದೆ ಕೆಲಸ ಮಾಡುತ್ತಿದ್ದಾಗ, ಅಲ್ಲಿ ಗಾರೆ ಕೆಲಸ ಮಾಡುತ್ತಿದ್ದ ವೆಂಕಟೇಶ್ ಎಂಬಾತನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಕಳೆದ ಮೂರು ವರ್ಷಗಳಿಂದ ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅವರ ಪ್ರೀತಿಯ ವಿಷಯ ತಿಳಿದ ಯುವತಿಯ ಪೋಷಕರು, ಆಕೆಯನ್ನು ಊರಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಿಸಿದ್ದರು.
ಮದುವೆಯಾಗಿ ಗಂಡನ ಮನೆಗೆ ಹೋದ ಗೃಹಿಣಿ, ಪ್ರೀತಿಸಿದ ವೆಂಕಟೇಶ್‌ಗೆ ಕರೆ ಮಾಡಿ, ತಾನು ಅವನೊಂದಿಗೆ ಬರುವುದಾಗಿ ತಿಳಿಸಿದ್ದಾಳೆ. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ, ಮದುವೆಯಾದ ಕೇವಲ 15 ದಿನಗಳಲ್ಲೇ ಗಂಡನ ಮನೆ ಬಿಟ್ಟು, ಪ್ರೀತಿಸಿದ ಯುವಕನ ಜೊತೆ ಕೊಪ್ಪಳಕ್ಕೆ ಬಂದಿದ್ದಾಳೆ.
ಈ ವಿಷಯ ತಿಳಿದ ಯುವತಿಯ ಪೋಷಕರು ಆಂಧ್ರಪ್ರದೇಶದಿಂದ ಕೊಪ್ಪಳಕ್ಕೆ ಆಗಮಿಸಿ, ಈ ಜೋಡಿಯ ಹುಡುಕಾಟ ನಡೆಸಿದ್ದಾರೆ. ಸದ್ಯ, ಈ ಜೋಡಿ ತಮ್ಮ ರಕ್ಷಣೆಗಾಗಿ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ) ಮೊರೆ ಹೋಗಿದ್ದು, ತಮಗೆ ರಕ್ಷಣೆ ಸಿಗುವವರೆಗೂ ಎಲ್ಲಿಗೂ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.