
ಧರ್ಮಸ್ಥಳ: ಧರ್ಮ ಮತ್ತು ದೇವರ ವಿಷಯದಲ್ಲಿ ಜನರ ನಂಬಿಕೆಗಳಿಗೆ ಘಾಸಿ ಮಾಡುವ ಷಡ್ಯಂತ್ರವನ್ನು ದೇಶದ ಒಳಗೆ ಹಾಗೂ ಹೊರಗಿನ ಕೆಲವು ಶಕ್ತಿಗಳು ನಡೆಸುತ್ತಿವೆ ಎಂದು ಮಾಜಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತೀವ್ರವಾಗಿ ಟೀಕಿಸಿದ್ದಾರೆ. ಈ ಕುರಿತು ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಮತ್ತು ಶ್ರೀ ಅಣ್ಣಪ್ಪ ಸ್ವಾಮಿಯ ಆಶೀರ್ವಾದದಿಂದ ಹಲವು ಕುಟುಂಬಗಳು ಏಳಿಗೆ ಕಂಡಿವೆ. ಆದರೆ, ಕೆಲ ಶಕ್ತಿಗಳು ನಮ್ಮ ನಂಬಿಕೆಯ ಗೋಡೆ ಶಿಥಿಲಗೊಳ್ಳಬೇಕು ಮತ್ತು ನಾವು ಸಾನಿಧ್ಯದಿಂದ ವಿಮುಖರಾಗಬೇಕು ಎಂದು ಬಯಸುತ್ತಿವೆ. ಇಂತಹವರಿಗೆ ನ್ಯಾಯ ಮತ್ತು ಸತ್ಯ ಮುಖ್ಯವಲ್ಲ ಎಂದು ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಮ್ಮ ವಿಶ್ವಾಸದ ಬುನಾದಿಯನ್ನು ಸಡಿಲಿಸಿ ಷಡ್ಯಂತ್ರಗಾರರು ಯಶಸ್ವಿಯಾಗುವುದಕ್ಕೆ ನಾವು ಬಿಡಬಾರದು,” ಎಂದು ಕಟೀಲ್ ಕರೆ ನೀಡಿದ್ದಾರೆ. ಅಲ್ಲದೆ, “ದೈವ-ದೇವರುಗಳ ಆಶೀರ್ವಾದ ಧರ್ಮ ರಕ್ಷಕರ ಮೇಲೆ ಸದಾ ಇರಲಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯು ಪ್ರಸ್ತುತ ಧರ್ಮಸ್ಥಳದ ಸುತ್ತಲಿನ ವಿವಾದಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.