
ಕಾರ್ಕಳ : ಕಾರ್ಕಳ ಕಾಂಗ್ರೆಸ್ ನಲ್ಲಿ ಸತ್ಯ ಮಾತಾಡಿದವರನ್ನು ಪಕ್ಷದಿಂದ ಉಚ್ಚಾಟಿಸುವ ಧೋರಣೆ ಇತ್ತೀಚಿನದು ಮತ್ತು ಹೊಸತೇನು ಅಲ್ಲ. ಹಳೆಯ ಚಾಳಿಯನ್ನೇ ಕಾಂಗ್ರೆಸ್ ಪಾಳಯದ ನಾಯಕ ಮುನಿಯಾಲು ಉದಯಕುಮಾರ್ ಶೆಟ್ಟಿ ಮುಂದುವರೆಸಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರ ಸರ್ವಾಧಿಕಾರಿ ಧೋರಣೆ ಎಲ್ಲರಿಗೂ ತಿಳಿದದ್ದೆ.ಇದೇನು ಮೊದಲು ಅಲ್ಲ. ಕೊನೆಯೂ ಅಲ್ಲ. ಮೈತುಂಬ ದ್ವೇಷ, ನಿಂದನೆ ಮತ್ತು ದಮನಕಾರಿ ರಾಜಕೀಯ ಕೊಳಕು ಮೆತ್ತಿಕೊಂಡಿರುವ ಅವರು ಯಾರೇ ಸತ್ಯ ಮಾತನಾಡಿದರೂ ಅವರನ್ನು ಬಾಯಿ ಮುಚ್ಚಿಸುವ, ಕೀಳು ಮನಸ್ಸಿನ ನಾಯಕ. ಈ ಹಿಂದೆ ಕಾರ್ಕಳದಲ್ಲಿ ಕಾಂಗ್ರೆಸ್ ಅನ್ನು ಕಟ್ಟಿದ ದಿ. ಗೋಪಾಲ ಭಂಡಾರಿ, ಮಂಜುನಾಥ ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ಶೇಖರ್ ಮಡಿವಾಳ ಇಂತಹ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರನ್ನು ಕಡೆಗಣಿಸಿ,ಮೂಲೆಗುಂಪಾಗಿಸಿದ ಕೀರ್ತಿ ಇದೇ ಉದಯ ಶೆಟ್ಟಿಯವರಿಗಿದೆ. ಇದೀಗ ಕೃಷ್ಣ ಶೆಟ್ಟಿಯವರ ಮೇಲೂ ಅದನ್ನೆ ಪ್ರಯೋಗಿಸಲಾಗುತ್ತಿದೆ. ಇಂದು ಪಕ್ಷದಲ್ಲಿ ಅವಕಾಶವಾದಿತನದ ಮೂಲಕ ಉದಯ ಶೆಟ್ಟಿ ಬೆಳೆದು ಬಂದಿದ್ದಾರೆ, ಅವರ ಪಕ್ಷದವರೇ ಅವರನ್ನು ಹೆಡೆಮುರಿಕಟ್ಟಿ ಹೊರದಬ್ಬುವ ದಿನ ದೂರವಿಲ್ಲ.
ಇನ್ನೊಬ್ಬರು ಬೆಳೆಯಬಾರದು, ಅಭಿವೃದ್ದಿ ಆಗಬಾರದೆನ್ನುವ ಅವರ ಸ್ವಾರ್ಥ ರಾಜಕೀಯ ನಡೆ ಕೇವಲ ಕಾಂಗ್ರೆಸಿಗರಿಗಷ್ಟೇ ಅಲ್ಲ, ಇಡೀ ಕ್ಷೇತ್ರಕ್ಕೂ ಅದರಿಂದ ನಷ್ಟ ಉಂಟಾಗುತ್ತಿದೆ. ಕಳೆದ ಚುನಾವಣೆ ಬಳಿಕ ಸೋಲಿನ ಹತಾಶೆಯಿಂದ ವರ್ತಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ, ದಿನದಿಂದ ದಿನಕ್ಕೆ ಸುಳ್ಳು ಹೇಳುವ, ಪಕ್ಷ ಬದಲಿಸುವ ಅವರ ನಾಟಕ ಎಲ್ಲರಿಗೂ ಗೊತ್ತಾಗಿದೆ. ಇಂತಹವರು ಯಾವ ಪಕ್ಷಕ್ಕೂ ನಂಬಿಗಸ್ತರಾಗಲು ಯೋಗ್ಯರಲ್ಲ, ಬಿಜೆಪಿ ಸರಕಾರದ ಅವಧಿಯಲ್ಲಿ ಅವರು ಎಲ್ಲೆಲ್ಲಿ ಏನೇನು ಲಾಭ ಪಡೆದುಕೊಂಡಿದ್ದಾರೆ ಎನ್ನುವುದನ್ನು ವಾರದೊಳಗೆ ಬಹಿರಂಗಪಡಿಸುತ್ತೇವೆ,” ಎಂದು ಎಚ್ಚರಿಸಿದರು.