
- ಕೀಳು ಮಟ್ಟದ ಹೇಳಿಕೆ ನಿಲ್ಲಿಸದಿದ್ದರೆ ತಕ್ಕ ಉತ್ತರ : ಬಿಜೆಪಿ ಜಿಲ್ಲಾ ಯುವ ಮೋರ್ಚಾ
ಉಡುಪಿ : ಜು.23ರಂದು ಹಾರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರ ಕಾರ್ಯ ವೈಖರಿಯನ್ನು ಟೀಕಿಸುವ ಭರದಲ್ಲಿ ದಶಕಗಳಿಂದ ಸ್ವಯಂ ಕಾಂಗ್ರೆಸ್ ಬೆಂಬಲಿತ ಜನಪ್ರತಿನಿಧಿಗಳ ಆಡಳಿತದಲ್ಲಿರುವ ಹಾರಾಡಿ ಗ್ರಾ.ಪಂ. ಕಟ್ಟಡ ಸೋರುತ್ತಿರುವುದನ್ನು ಟೀಕಿಸಿರುವ ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ ಸ್ವಪಕ್ಷಿಯರಿಂದಲೇ ಟೀಕೆಗೆ ಒಳಗಾಗಿದ್ದು, ಹಾರಾಡಿ ಗ್ರಾ.ಪಂ. ಮರ್ಯಾದೆಯನ್ನು ಹರಾಜು ಹಾಕಿ ನಗೆಪಾಟಲಿಗೀಡಾಗಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಕುಂದರ್ ಹೊನ್ನಾಳ ತಿಳಿಸಿದ್ದಾರೆ.
ಉಡುಪಿ ಶಾಸಕರ ಕಾರ್ಯವೈಖರಿ ಹಾಗೂ ಜನಪ್ರಿಯತೆಯನ್ನು ಸಹಿಸಲಾಗದೆ ತೀವ್ರ ಹತಾಶರಾಗಿ ಬೇಕಾಬಿಟ್ಟಿಯಾಗಿ ಮಾತನಾಡುತ್ತಿರುವ ಪ್ರಸಾದ್ ಕಾಂಚನ್ ಗೆ ಓರ್ವ ಜನಪ್ರತಿನಿಧಿಗೆ ಯಾವ ರೀತಿಯಲ್ಲಿ ಗೌರವ ನೀಡಬೇಕೆಂಬ ಕನಿಷ್ಠ ಜ್ಞಾನವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ತಿಳಿಸಿದ್ದಾರೆ.
ತಮ್ಮದೇ ಪಕ್ಷದ ಹಾರಾಡಿ ಗ್ರಾಮ ಪಂಚಾಯತ್ ಆಡಳಿತವನ್ನು ಟೀಕಿಸಿದ ಪ್ರಸಾದ್ ಕಾಂಚನ್ ಗೆ ಬಿಜೆಪಿ ಕಾರ್ಯಕರ್ತರ ಪರವಾಗಿ ಧನ್ಯವಾದ ತಿಳಿಸುತ್ತೇನೆ. ಈ ಹೇಳಿಕೆಯಿಂದ ಹಾರಾಡಿ-ಬೈಕಾಡಿ ಗ್ರಾಮ ಪಂಚಾಯತ್ ಕಾಂಗ್ರೆಸ್ ಸದಸ್ಯರ ವೈಫಲ್ಯವನ್ನು ಅವರ ನಾಯಕನೇ ಖುದ್ದಾಗಿ ಹೇಳಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಚಪ್ಪಲಿಯನ್ನು ಬಟ್ಟೆಯಲ್ಲಿ ಸುತ್ತಿ ಹೊಡೆದಂತಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಜನರಿಂದ ಆಯ್ಕೆಯಾಗಿರುವ ಶಾಸಕರಿಗೆ ಏಕ ವಚನದ ಪ್ರಯೋಗದ ಜೊತೆಗೆ ಕಾಂಚನ್ ಅವರ ಲಜ್ಜೆಗೇಡಿತನದ ಹೇಳಿಕೆಗಳನ್ನು ಬುದ್ದಿವಂತರ ಜಿಲ್ಲೆ ಉಡುಪಿಯ ಪ್ರಜ್ಞಾವಂತ ಜನತೆ ಎಂದೂ ಸಹಿಸಲಾರರು. ಇಂತಹ ಕೀಳು ಮಟ್ಟದ ಹೇಳಿಕೆಯನ್ನು ಮುಂದುವರಿಸಿದಲ್ಲಿ ಜಿಲ್ಲಾ ಯುವ ಮೋರ್ಚಾ ತಕ್ಕ ಉತ್ತರ ನೀಡಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಪ್ರದೀಪ್ ಕುಂದರ್ ಹೊನ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.