
ಕಾರ್ಕಳ : ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ “ಶಕ್ತಿ ಯೋಜನೆ”ಯು ಪ್ರತಿಷ್ಠಿತ “Golden Book of World Record” ನಲ್ಲಿ ದಾಖಲಾಗಿದ್ದು ಈ ಐತಿಹಾಸಿಕ ಸಾಧನೆಗೆ ಕಾರಣರಾದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ಸಾರಿಗೆ ಸಚಿವರಾದ ಸನ್ಮಾನ್ಯ ರಾಮಲಿಂಗಾ ರೆಡ್ಡಿಯವರಿಗೆ ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ, ಹಾಗೂ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ನಾಡಿನ ಬಡ ಮಹಿಳೆಯರಿಗೆ ಉಪಯೋಗವಾಗಲಿ ಎನ್ನುವ ಸದುದ್ದೇಶದಿಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಶಕ್ತಿ ಯೋಜನೆಯಡಿ 2023 ಜೂನ್ 11 ತಾರೀಖಿನಿಂದ 2025 ಜುಲೈ 25 ರವರೆಗೆ 504 ಕೋಟಿ 90 ಲಕ್ಷಕ್ಕೂ ಹೆಚ್ಚು ಬಾರಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಇದು ಮಹಿಳಾ ಸಬಲೀಕರಣ ಹಾಗೂ ಜನರ ಸರ್ವಾಂಗೀಣ ಅಭಿವೃದ್ಧಿಯ ಕುರಿತು ಕಾಂಗ್ರೆಸ್ ಪಕ್ಷ ಹೊಂದಿರುವ ದೂರದೃಷ್ಟಿಯನ್ನು ಸೂಚಿಸುತ್ತದೆ.
ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಉದ್ಯೋಗಕ್ಕೆ ತೆರಳುವ ಮಹಿಳೆಯರು, ಶಾಲಾ ಕಾಲೇಜಿಗೆ, ವೈದ್ಯಕೀಯ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳುವ, ಉದ್ಯೋಗಕ್ಕಾಗಿ ನಿತ್ಯ ಸಂಚರಿಸುವ ಮಹಿಳೆಯರಿಗೆ ಅತ್ಯಂತ ಉಪಕಾರಿಯಾಗಿದೆ ಹಾಗೂ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನತೆಗೆ ಆಗುತ್ತಿರುವ ಉಪಯೋಗಗಳನ್ನು ಇಂದು ವಿಶ್ವ ದಾಖಲೆಯ ಪುಸ್ತಕಗಳು ಗುರುತಿಸಿರುವುದು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿ ರಾಜ್ಯ ದಿವಾಳಿಯಾಗುತ್ತದೆ ಎಂದು ಹುಯಿಲೆಬ್ಬಿಸಿದ ಬಿಜೆಪಿ ಪಕ್ಷದ ಅಪಪ್ರಚಾರಗಳಿಗೆ ಇದು ಸರಿಯಾದ ಉತ್ತರವಾಗಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ನಕಲು ಮಾಡುತ್ತಿದ್ದಾರೆ, ಹಾಗಾಗಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ವಿಶ್ವ ದಾಖಲೆಯ ಪುಸ್ತಕ ಸೇರಿದ್ದು ಮಾತ್ರವಲ್ಲ ಬಿಜೆಪಿ ನಾಯಕರ ಕಣ್ಣನ್ನು ತೆರೆಸುವಲ್ಲಿಯೂ ಯಶಸ್ವಿಯಾಗಿದೆ ಎಂದು ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ