
ಉಡುಪಿ : ಪರಶುರಾಮನ ನಕಲಿ ಕಂಚಿನ ಪ್ರತಿಮೆಯ ವಿಚಾರವಾಗಿ ನಿರ್ಮಿತಿ ಕೇಂದ್ರದ ಅಧಿಕಾರಿಗಳ ವಿರುದ್ದ ಪೋಲೀಸರು ಕಾರ್ಕಳ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿರುವ ಹಿನ್ನಲೆಯಲ್ಲಿ ಆ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗವು ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಿದೆ.
ಮನವಿ : ಕಾರ್ಕಳ ಎರ್ಲಪಾಡಿ ಗ್ರಾಮದ ಉಮ್ಮಿಕಲ್ಲ್ ಬೆಟ್ಟದ ಮೇಲೆ ನಿರ್ಮಾಣಗೊಂಡಿರುವ ಪರಶುರಾಮನ ಪ್ರತಿಮೆಯನ್ನು ಕಂಚಿನಿಂದ ಮಾಡದೆ, ಕಾಮಗಾರಿಯ ವರ್ಕ್ ಆರ್ಡರ್ ನಲ್ಲಿರುವ ಷರತ್ತುಗಳನ್ನು ಪಾಲಿಸದೆ, ಮತ್ತು ಪ್ರತಿಮೆಯ ಸೊಂಟದ ಮೇಲ್ಬಾಗವನ್ನು ನಾಲ್ಕು ತಿಂಗಳ ಕಾಲ ನಿರ್ಮಿತಿ ಕೇಂದ್ರದ ಶೆಡ್ ನಲ್ಲಿ ಇರಿಸಿಕೊಂಡು ಅದನ್ನು ಬೆಂಗಳೂರಿಗೆ ಸಾಗಾಟ ಮಾಡಿರುವುದಾಗಿ ಸುಳ್ಳು ಹೇಳಿದಕ್ಕಾಗಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಹಾಗೂ ಇಂಜಿನಿಯರ್ ಸಚಿನ್ ವೈ ಇವರು ಅಪರಾಧಿಕ ಒಳಸಂಚು, ನಂಬಿಕೆ ದ್ರೋಹ, ವಂಚನೆ ಎಸಗಿ ಸಾಕ್ಷಿ ನಾಶ ಮಾಡಿರುತ್ತಾರೆ ಎಂದು ಅವರ ವಿರುದ್ದ ಕಲಂ 420, 409,201,120(ಬಿ) ಜೊತೆಗೆ 34 ಐಪಿಸಿ ಯಂತೆ 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ತಯಾರಿಸಿದ ಕಾರ್ಕಳ ಪೋಲೀಸರು ಮಾನ್ಯ ಕಾರ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಇದೊಂದು ಗಂಭೀರ ಪ್ರಕರಣವಾಗಿದ್ದು ಕರ್ನಾಟಕ ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪಗಳಲ್ಲಿಯೂ ಚರ್ಚೆಗಳಾಗಿ ಬಾರೀ ಕೋಲಾಹಲಕ್ಕೆ ಕಾರಣವಾಗಿರುತ್ತದೆ. ಸರ್ಕಾರಕ್ಕೆ ಮೋಸ ವಂಚನೆಯ ನಡೆಸಿ ರಾಜ್ಯದ ಗಮನ ಸೆಳೆದ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಅಧಿಕಾರಿಗಳನ್ನು ಮತ್ತೆ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟರೆ ಇನ್ನಷ್ಟು ಅಕ್ರಮಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ, ಮತ್ತು ಜಿಲ್ಲೆಯ ಜನರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದಂತಾಗುತ್ತದೆ. ಈ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಅಧಿಕಾರಿಗಳು ಮತ್ತೆ ಇಲ್ಲಿಯೇ ಮುಂದುವರಿಸಿದರೆ ಸಾಕ್ಷಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾಗಿರುವ ಅರುಣ್ ಕುಮಾರ್ ಮತ್ತು ಇಂಜಿನಿಯರ್ ಸಚಿನ್ ವೈ ಅವರನ್ನು ಸೇವೆಯಿಂದ ವಜಾ ಮಾಡಬೇಕಾಗಿ ತಮ್ಮಲ್ಲಿ ಈ ಮೂಲಕ ವಿನಂತಿ ಮಾಡುತ್ತಿದ್ದೇವೆ ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷ – ಪುರಸಭೆಯ ಮಾಜಿ ಅಧ್ಯಕ್ಷ ಸುಬಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ- ಪುರಸಭಾ ಸದಸ್ಯ ವಿವೇಕಾನಂದ ಶೆಣೈ, ಗ್ರಾಮಿಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ, ರಹೀಮ್ ಅಜೆಕಾರ್, ವಕ್ತಾರ ಪ್ರದೀಪ್ ಬೇಲಾಡಿ, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಯೊಗೀಶ್ ಇನ್ನಾ, ಗ್ಯಾರಂಟಿ ಸಮಿತಿ ಸದಸ್ಯ ಸಂತೋಷ್ ದೇವಾಡಿಗ, ಪಂಚಾಯತ್ ಸದಸ್ಯ ದೀಕ್ಷಿತ್, ದೀಪಕ್ ಶೆಟ್ಟಿ, ರಂಜಿತ್ ಮಾಳ, ಸುಹಾಸ್ ಖಾವ ಮೊದಲಾದವರು ಉಪಸ್ಥಿತರಿದ್ದರು.