
ಬೆಂಗಳೂರು: ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಶಾಲಾ ಶಿಕ್ಷಣ ಇಲಾಖೆ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳ ಆರಂಭೋತ್ಸವ, ಪಠ್ಯಾರಂಭಕ್ಕೆ ಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮೇ 29ರಿಂದ ಶಾಲಾ ವರ್ಷಾರಂಭವಾಗಲಿದ್ದು, ಆ ದಿನವೇ ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಹಾಜರಾಗಿ ವಿದ್ಯಾರ್ಥಿಗಳಿಗಾಗಿ ವಿಶೇಷ ಆರಂಭ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಇಲಾಖೆಯು ಸ್ಪಷ್ಟ ಸೂಚನೆ ನೀಡಿದೆ.
ಗೈರು ಹಾಜರಾಗುವ ಮಕ್ಕಳ ಬಗ್ಗೆ ಗಮನ:
ಅನುಕ್ರಮವಾಗಿ ಶಾಲೆಗೆ ಗೈರುಹಾಜರಾಗುವ ಮತ್ತು ಮಧ್ಯದಲ್ಲಿ ವಿದ್ಯಾಭ್ಯಾಸ ತೊರೆಯುವ ಮಕ್ಕಳ ವಿಚಾರದಲ್ಲಿ ಶಿಕ್ಷಕರು ಸ್ಥಳೀಯ ಶಿಕ್ಷಣ ಸಂಯೋಜಕರೊಂದಿಗೆ ಸಂಪರ್ಕ ಹೊಂದಿ, ಅವರು ಶಾಲೆಗೆ ಮರಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಕ್ರಿಸ್‌ಮಸ್ ರಜೆಗೆ ನಿಯಮಗಳು:
ಕ್ರಿಸ್‌ಮಸ್ ವೇಳೆಗೆ ರಜೆ ನೀಡುವ ಉದ್ದೇಶವಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು, ಈ ಕುರಿತು ಉಪನಿರ್ದೇಶಕರಿಗೆ ಪೂರ್ವಮನವಿ ಸಲ್ಲಿಸಬೇಕು. ಇದರ ಪರಿಶೀಲನೆಯ ನಂತರ ಅನುಮತಿ ನೀಡಲಾಗುತ್ತದೆ. ಕ್ರಿಸ್‌ಮಸ್ ರಜೆಯನ್ನು ಅಕ್ಟೋಬರ್‌ನ ಮಧ್ಯಂತರ ರಜೆಯಲ್ಲಿ ಕಡಿತಗೊಳಿಸಿ ಸರಿದೂಗಿಸಬೇಕು ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.