
ಬಳ್ಳಾರಿ, ಮಾರ್ಚ್.7: ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ವೀಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಎಂಡಿ ವಿರುದ್ಧ ಬಳ್ಳಾರಿ ಕೌಲ್‌ಬಝಾರ್ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.
ಧಾರ್ಮಿಕ ಭಾವನೆಗೆ ಧಕ್ಕೆಯ ಆರೋಪ
ಎಫ್‌ಐಆರ್ ಪ್ರಕಾರ, ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಜನರ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ವೀಡಿಯೋ ಮಾಡಲಾಗಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಬಿಎನ್‌ಎಸ್ ಕಲಂ 299 ಅಡಿ ಪ್ರಕರಣ ದಾಖಲು
ಬುಧವಾರ ರಾತ್ರಿ ಸಮೀರ್ ಎಂಡಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 299 ಅಡಿಯಲ್ಲಿ ಕೇಸು ದಾಖಲಾಗಿದೆ. ಈ ವೀಡಿಯೋ ಸೌಜನ್ಯ ಪ್ರಕರಣವನ್ನು ಮತ್ತೆ ಮುನ್ನಲೆಗೆ ತಂದಿದೆ ಎಂದು ವರದಿಯಾಗಿದೆ.
ನೋಟಿಸ್ ನೀಡಿ ಪೊಲೀಸರ ಹಿಂತಿರುಗುವ ನಿರ್ಧಾರ
ಯೂಟ್ಯೂಬರ್ ಸಮೀರ್ ಎಂಡಿ ಅವರ ಬಂಧನಕ್ಕೆ ಪೊಲೀಸರು ಮುಂದಾಗಿದ್ದರೂ, ವಿಚಾರಣೆಗೆ ಸಹಕರಿಸುವ ಭರವಸೆ ಪಡೆದ ಬಳಿಕ ನೋಟಿಸ್ ನೀಡಿದರು. ಈ ಕುರಿತು ಸಮೀರ್ ಎಂಡಿ ಯೂಟ್ಯೂಬ್ ಲೈವ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.