
ಸುಳ್ಯ: ಜ್ವರದಿಂದ ಬಳಲುತ್ತಿದ್ದ ಶಾಲಾ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಾಗ, ವೈದ್ಯಾಧಿಕಾರಿಯೊಬ್ಬರು ಆಕೆ ಗರ್ಭಿಣಿ ಎಂದು ತಪ್ಪು ವರದಿ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಜಿಲ್ಲಾ ಆರೋಗ್ಯ ಇಲಾಖೆಗೆ ದೂರು ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಜುಲೈ 1, 2025 ರಂದು, ಬಾಲಕಿ ತನ್ನ ಹೆತ್ತವರೊಂದಿಗೆ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜ್ವರದ ಚಿಕಿತ್ಸೆಗಾಗಿ ಬಂದಿದ್ದಳು. ಅಲ್ಲಿನ ವೈದ್ಯಾಧಿಕಾರಿ ಬಾಲಕಿಯನ್ನು ತಪಾಸಣೆ ಮಾಡಿ, ಹೊರರೋಗಿಗಳ ದಾಖಲಾತಿಯಲ್ಲಿ ‘ಯುಪಿಟಿ ಪಾಸಿಟಿವ್’ (ಗರ್ಭಿಣಿ) ಎಂದು ದಾಖಲಿಸಿ, ಮುಂದಿನ ತಪಾಸಣೆಗಾಗಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಹೋಗಲು ಸೂಚಿಸಿದ್ದರು.
ಇದರಿಂದ ಆಘಾತಕ್ಕೊಳಗಾದ ಹೆತ್ತವರು, ಬಾಲಕಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ಪರಿಶೀಲನೆ ಮಾಡಿಸಿದಾಗ ಆಕೆ ಗರ್ಭಿಣಿ ಅಲ್ಲ ಎಂದು ವರದಿ ಬಂದಿದೆ. ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲೂ ಗರ್ಭ ಧರಿಸಿದ ಕುರಿತು ಯಾವುದೇ ದೃಢೀಕರಣ ಸಿಗಲಿಲ್ಲ.
ವೈದ್ಯಾಧಿಕಾರಿಯು ಬಾಲಕಿ ಗರ್ಭಿಣಿ ಎಂದು ಎಲ್ಲರಿಗೂ ತಿಳಿಸಿದ್ದಾರೆ ಎಂಬ ಆರೋಪವಿದ್ದು, ಈ ಸುಳ್ಳು ಮಾಹಿತಿಯು ಸಾರ್ವಜನಿಕವಾಗಿ ಹರಡಿರುವ ಕಾರಣ 13 ವರ್ಷದ ಬಾಲಕಿ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾಳೆ. ಇದರಿಂದ ಆಕೆಯ ಕುಟುಂಬವು ಮಾನಸಿಕವಾಗಿ ತೀವ್ರ ನೋವು ಅನುಭವಿಸಿದೆ.
ಇದೀಗ ಬಾಲಕಿಯ ಹೆತ್ತವರು ದಾಖಲೆಗಳ ಸಹಿತ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ತನಿಖೆಗಾಗಿ ತಂಡವನ್ನು ರಚಿಸಿದ್ದಾರೆ. ಜುಲೈ 10 ರಂದು ತಂಡವು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ತನಿಖೆಯಲ್ಲಿ ತಪ್ಪು ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಚ್‌ಒ ತಿಳಿಸಿದ್ದಾರೆ.