
ಬೆಂಗಳೂರು: ನಿರುದ್ಯೋಗ ಮತ್ತು ವ್ಯವಸ್ಥೆಯ ವಿರುದ್ಧದ ಅಸಮಾಧಾನವು ಈಗ ಹೊಸ ರೂಪ ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಯುವಜನತೆಯ ಹೊಸ ಆಂದೋಲನವಾಗಿ ಹೊರಹೊಮ್ಮುತ್ತಿದೆ. ಕೇವಲ ನಾಲ್ಕೇ ದಿನಗಳಲ್ಲಿ ಮಿಲಿಯನ್ ಗಟ್ಟಲೆ ಜನರನ್ನು ಸೆಳೆದಿರುವ ಈ ಡಿಜಿಟಲ್ ಚಳವಳಿ, ಪ್ರಸ್ಥಾಪಿತ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ನಿರುದ್ಯೋಗಿ ಯುವಕರನ್ನು ಜಿರಳೆಗಳಿಗೆ ಹೋಲಿಸಿದ ಮಾತಿನಿಂದ ಕೆರಳಿದ ಯುವ ಸಮೂಹ, ಈಗ ಅದೇ ಹೆಸರನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಂಡಿದೆ. ಅಭಿಜೀತ್ ದೀಪ್ಕೆ ಎಂಬುವವರು ಆರಂಭಿಸಿದ ಈ ಅಭಿಯಾನವು ಈಗ ಇನ್‌ಸ್ಟಾಗ್ರಾಂನಲ್ಲಿ 14 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ದಾಖಲೆ ಬರೆದಿದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪಕ್ಷದ ಟೀ-ಶರ್ಟ್ ಬಿಡುಗಡೆ ಮಾಡುವ ಮೂಲಕ ಸಾಂಕೇತಿಕ ಬೆಂಬಲ ಸೂಚಿಸಿದ್ದಾರೆ.
ಮುಖ್ಯಾಂಶಗಳು:
- ರಾತ್ರೋರಾತ್ರಿ ಸಂಚಲನ: ಕೇವಲ 4 ದಿನಗಳಲ್ಲಿ 14 ಮಿಲಿಯನ್ ಫಾಲೋವರ್ಸ್ ಪಡೆಯುವ ಮೂಲಕ ಬಿಜೆಪಿ, ಕಾಂಗ್ರೆಸ್ ಮೀರಿಸಿದ ಸಿಜೆಪಿ.
- ಸಿಎಂ ಬೆಂಬಲ: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ‘ಐ ಆಯಮ್ ಕಾಕ್ರೋಚ್’ ಟೀ-ಶರ್ಟ್ ಅನಾವರಣ.
- ನ್ಯಾಯಾಧೀಶರ ಹೇಳಿಕೆಗೆ ಆಕ್ರೋಶ: ನಿರುದ್ಯೋಗಿಗಳನ್ನು ‘ಜಿರಳೆ’ ಎಂದಿದ್ದ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆಯ ವಿರುದ್ಧ ಹುಟ್ಟಿಕೊಂಡ ಪ್ರತಿಭಟನೆ.
- ಸೋಷಿಯಲ್ ಮೀಡಿಯಾ ಪವರ್: ಬೋಸ್ಟನ್ ವಿವಿ ವಿದ್ಯಾರ್ಥಿ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಆರಂಭವಾದ ಡಿಜಿಟಲ್ ಕ್ರಾಂತಿ.
ನ್ಯಾಯಾಲಯದ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳು “ಕೆಲವು ನಿರುದ್ಯೋಗಿಗಳು ಜಿರಳೆಗಳಿದ್ದಂತೆ, ಅವರು ಆರ್‌ಟಿಐ ಕಾರ್ಯಕರ್ತರ ಸೋಗಿನಲ್ಲಿ ವ್ಯವಸ್ಥೆಯನ್ನು ಹಾಳು ಮಾಡುತ್ತಾರೆ” ಎಂಬ ಆಕ್ಷೇಪಾರ್ಹ ಮಾತುಗಳನ್ನಾಡಿದ್ದರು. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಯುವಜನತೆ, ‘ನಾವೂ ಜಿರಳೆಗಳೇ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದಾರೆ. ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಈ ಆಂದೋಲನಕ್ಕೆ ಸಾಥ್ ನೀಡಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.



































