
ಉಡುಪಿ : ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಭಾರಿ ಮಂಡಿಸಿರುವ ರಾಜ್ಯದ 2025-26 ನೇ ವರ್ಷದ 4,08,549 ಕೋಟಿ ರೂ. ವೆಚ್ಚದ ಬಜೆಟ್, ಕಳೆದ ಆರ್ಥಿಕ ವರ್ಷದಲ್ಲಿ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿ ಸರಕಾರ ದಿವಾಳಿಯಾಗಿದೆ ಎಂದು ಗುಲ್ಲೆಬ್ಬಿಸಿದವರಿಗೆ ನೀಡಿದ ಸಮರ್ಪಕ ಉತ್ತರ ವಾಗಿದೆ. ಇದೊಂದು ವಿತ್ತೀಯ ಶಿಸ್ತು ಪಾಲನೆಯ ಬಜೆಟ್. ಸಮಾಜದ ಆರ್ಥಿಕ ಸಮಾನತೆ, ಸಾಮಾಜಿಕ ಸೌಹಾರ್ಧತೆ ಮತ್ತು ಸರ್ವಾಂಗೀಣ ಅಭಿವೃದ್ಧಿ ಮತ್ತು ಮಹಿಳೆ, ಮಕ್ಕಳು, ಕೂಲಿ ಕಾರ್ಮಿಕರ ಪರ ಒಲವುಳ್ಳ ಬಜೆಟ್ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಪ್ರತೀ ವಿಧಾನ ಸಭಾ ಕ್ಷೇತ್ರಗಳ ಮೂಲ ಸೌಲಭ್ಯ ಅಭಿವೃದ್ದಿಗಾಗಿ ಪ್ರತೀ ಕ್ಷೇತ್ರಗಳಿಗೆ 8000ಕೋ.ರೂ ಮೀಸಲು, ಮಹಿಳೆಯರ ಸಾಮಾಜಿಕ ಅಭ್ಯುದಯದ ಗುರಿಯೊಂದಿಗೆ ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ 94084 ಕೋ.ರೂ, ಮಕ್ಕಳ ಸಮಗ್ರ ಕ್ಷೇಮ ಸಾಧನೆಯ ಗುರಿಯೊಂದಿಗಿನ ಯೋಜನೆಗಳಿಗೆ 42033 ಕೋ.ರೂ ಮೀಸಲಿಟ್ಟಿರುವುದು ಸ್ವಾಗತಾರ್ಹ. ಧಾರ್ಮಿಕ ದತ್ತಿ ಇಲಾಖಾ ದೇಣಿಗೆ ದೇವಸ್ಥಾನಗಳ ಅರ್ಚಕರ ತಸ್ತಿಕ್ ಹಣವನ್ನು ವಾರ್ಷಿಕ 60,000 ರೂ. ಯಿಂದ 72,000 ಏರಿಕೆ, ಅಂಗನವಾಡಿ ಮತ್ತು ಅಡುಗೆ ಸಹಾಯಕಿಯರಿಗೆ ಕ್ರಮವಾಗಿ 1000 ಮತ್ತು 750 ರೂ. ಹೆಚ್ಚುವರಿ ಹಾಗೂ ರೈತ ಕುಟುಂಬಗಳ ಜಾನುವಾರುಗಳ ಆಕಸ್ಮಿಕ ಸಾವಿಗೆ ಅನುಗ್ರಹ ಯೋಜನೆಯಡಿ ಪರಿಹಾರದಲ್ಲಿಯೂ ಏರಿಕೆ ಮೊದಲಾದ ಯೋಜನೆಗಳು ಗ್ರಾಮೀಣ ಪರಿಸರ ವರ್ಗದಲ್ಲಿ ಸಂತಸ ತಂದಿದೆ ಮತ್ತು ಈ ಬಾರಿಯ ಬಜೆಟಿನಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಟಾನಕ್ಕೆ 51,300ಕೋ.ರೂ. ಮೀಸಲಿಟ್ಟಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ತನ್ನ ಆಡಳಿತದ ಅವಧಿಯಲ್ಲಿ ವಿತ್ತೀಯ ಶಿಸ್ತು ಪಾಲನೆಯ ಮೂಲಕ ರಾಜ್ಯದ ಅಭಿವೃದ್ಧಿಯನ್ನು ಎತ್ತಿ ಹಿಡಿದಿರುವುದರಿಂದ ಇದು ಸಾಧ್ಯವಾಗಿದೆ. ಕೇಂದ್ರ ಸರಕಾರ ರಾಜ್ಯಕ್ಕೆ ನೀಡಬೇಕಾದ ತೆರಿಗೆ ಹಣ ಕಡಿತದ ಹೊರತಾಗಿಯೂ ಒಟ್ಟು “ರಾಷ್ಟ್ರೀಯ ಉತ್ಪನ್ನ (ಜಿಡಿಪಿ) 8.4ಕ್ಕೆ ದೇಣಿಗೆಯೆಂಬಂತೆ ರಾಜ್ಯ ಸರಕಾರ ತನ್ನ “ರಾಜ್ಯ ರಾಷ್ಟ್ರೀಯ ಉತ್ಪನ್ನವನ್ನು (ಜಿಎಸ್ ಡಿಪಿ) 7.4 ರ ಪಥಕ್ಕೆ ತಂದು ನಿಲ್ಲಿಸಿರುವುದು ಸರಕಾರದ ಸಾಧನೆಗೆ ಸಾಕ್ಷಿಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.