
ಪುತ್ತೂರು: ಅಪಪ್ರಚಾರ ಮಾಡುವವರ, ಕೋಮು ಸೌಹಾರ್ದಕ್ಕೆ ಧಕ್ಕೆ ತರುವವರ ಮತ್ತು ಸುಳ್ಳು ಮಾಹಿತಿ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕಾಗಿ ರಾಜ್ಯ ಸರ್ಕಾರವು ಹೊಸ ಕಾನೂನು ಜಾರಿ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.
ಪುತ್ತೂರಿನಲ್ಲಿ ಸೋಮವಾರ ಅಶೋಕ ಜನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹೊಸ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು. ಈಗಾಗಲೇ ಸಚಿವರಾದ ಎಚ್.ಕೆ. ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಅವರಿಗೆ ಕಾನೂನು ರೂಪುಗೊಳಿಸಲು ಸೂಚನೆ ನೀಡಲಾಗಿದ್ದು, ಅವರಿಬ್ಬರೂ ಆ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ದಕ್ಷಿಣ ಕನ್ನಡದಲ್ಲಿ ಶಾಂತಿಯ ವಾತಾವರಣ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕೋಮು ಸಂಘರ್ಷದ ಇತಿಹಾಸವನ್ನು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, “ಈ ರೀತಿಯ ಗಲಭೆಯಲ್ಲಿ ದ.ಕ. ಜಿಲ್ಲೆ ಮೊದಲ ಸ್ಥಾನದಲ್ಲಿ ಇತ್ತು. ಕೋಮು ಸಂಘರ್ಷಗಳ ಸಂದರ್ಭದಲ್ಲಿ ಸಾವನ್ನಪ್ಪುವುದು ಬಡವರ ಮಕ್ಕಳೇ ವಿನಾ ಶ್ರೀಮಂತರ ಮಕ್ಕಳು ಅಲ್ಲ,” ಎಂದರು.
ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಜಿಲ್ಲೆಯ ಅಧಿಕಾರಿಗಳನ್ನು ಬದಲಾಯಿಸಿ, ದಕ್ಷ ಪೊಲೀಸ್ ಕಮಿಷನರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಿಸಿದ ಪರಿಣಾಮವಾಗಿ ಈಗ ಜಿಲ್ಲೆಯಲ್ಲಿ ಶಾಂತಿಯ ವಾತಾವರಣ ಸುಧಾರಣೆ ಕಂಡಿದೆ. ದಕ್ಷ ಅಧಿಕಾರಿಗಳಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕೇಂದ್ರದ ದೀಪಾವಳಿ ಕೊಡುಗೆಗೆ ವಾಗ್ದಾಳಿ
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿಗಳು, ಕೇಂದ್ರದ ಜಿಎಸ್‌ಟಿ ಪರಿಷ್ಕರಣೆಯನ್ನು ‘ದೀಪಾವಳಿ ಗಿಫ್ಟ್’ ಎಂದು ಲೇವಡಿ ಮಾಡಿದರು. “ಕೇಂದ್ರದ ನರೇಂದ್ರ ಮೋದಿ ಸರಕಾರ ಎಂಟು ವರ್ಷದ ಹಿಂದೆ ಜಿಎಸ್‌ಟಿ ಜಾರಿ ಮಾಡಿ ಬೇಕಾಬಿಟ್ಟಿ ತೆರಿಗೆ ಸಂಗ್ರಹಿಸಿತ್ತು. ಎಂಟು ವರ್ಷಗಳಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ವಾಪಸ್ ಕೊಟ್ಟುಬಿಡಿ,” ಎಂದು ಆಗ್ರಹಿಸಿದರು.
ಜಿಎಸ್‌ಟಿ ಪರಿಣಾಮದಿಂದಾಗಿ ರಾಜ್ಯಗಳು ಆರ್ಥಿಕ ಬಡತನಕ್ಕೆ ಈಡಾಗಿದ್ದು, ಕರ್ನಾಟಕ ಸರ್ಕಾರವೊಂದಕ್ಕೆ 15 ಸಾವಿರ ಕೋ.ರೂ. ನಷ್ಟ ಉಂಟಾಗುತ್ತಿದೆ ಎಂದರು.
ಐದು ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ಟೀಕಿಸಿದ್ದರು. ಆದರೆ, ಎಲ್ಲ ಯೋಜನೆಗಳನ್ನು ಜಾರಿ ಮಾಡಿ ತೋರಿಸಿದ್ದೇವೆ. ಗ್ಯಾರಂಟಿ ಯೋಜನೆಗಳಿಗಾಗಿ ಕಳೆದ ಎರಡೂವರೆ ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂ. ಖರ್ಚು ಮಾಡಿದೆ ಎಂದ ಸಿಎಂ, ಶಕ್ತಿ ಯೋಜನೆ ಜಾರಿ ಆದ ಬಳಿಕ ತಲಾ ಆದಾಯದಲ್ಲಿ ಇಡೀ ದೇಶದಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನ ಪಡೆದಿದೆ ಎಂದು ಸ್ಪಷ್ಟಪಡಿಸಿದರು.



































