
ಹಾಸನ: ಸರ್ಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮಗೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಅದರಲ್ಲಿ ತಪ್ಪೇನಿದೆ?” ಎಂದು ಪ್ರಶ್ನಿಸಿದ್ದಾರೆ.
ಹಾಸನಾಂಬೆ ದರ್ಶನಕ್ಕೆಂದು ಬುಧವಾರ ಜಿಲ್ಲೆಗೆ ಆಗಮಿಸಿದ್ದ ಅವರು, ಬೂವನಹಳ್ಳಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ತಮಿಳುನಾಡು ಮಾದರಿ ಪರಿಶೀಲಿಸಿ ಕ್ರಮ
“ಆರ್‌ಎಸ್‌ಎಸ್ ಅಷ್ಟೇ ಅಲ್ಲ, ಬೇರೆ ಯಾವುದೇ ಸಂಘಟನೆ ಇರಲಿ, ಸರ್ಕಾರಿ ಶಾಲೆ ಅಥವಾ ಸಾರ್ವಜನಿಕ ಜಾಗದಲ್ಲಿ ಯಾವುದೇ ಚಟುವಟಿಕೆ ಮಾಡಬಾರದು. ಯಾರಿಗೂ ತೊಂದರೆ ಕೊಡಬಾರದು ಎಂಬುದು ನಮ್ಮ ಉದ್ದೇಶ,” ಎಂದು ಸಿಎಂ ಸ್ಪಷ್ಟಪಡಿಸಿದರು.
“ಈಗಾಗಲೇ ತಮಿಳುನಾಡಿನಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರಿದ್ದಾರೆ. ಅಲ್ಲಿಯ ವಿಧಾನ ನೋಡಿಕೊಂಡು, ಮಾಹಿತಿ ಪಡೆದು ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಅದನ್ನು ಪರಿಶೀಲಿಸಿ ರಾಜ್ಯದಲ್ಲೂ ತಮಿಳುನಾಡಿನಂತೆಯೇ ಕ್ರಮ ಕೈಗೊಳ್ಳುತ್ತೇವೆ,” ಎಂದು ಸಿದ್ದರಾಮಯ್ಯ ಘೋಷಿಸಿದರು.
ಪ್ರಿಯಾಂಕ್ ಖರ್ಗೆಗೆ ರಕ್ಷಣೆ, ವಿಪಕ್ಷಗಳಿಗೆ ತಿರುಗೇಟು
ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬಂದಿರುವ ಬೆದರಿಕೆ ಕರೆಗಳ ಕುರಿತು ಪ್ರತಿಕ್ರಿಯಿಸಿ, “ಪ್ರಿಯಾಂಕ್ ಖರ್ಗೆ ಅವರಿಗೆ ರಕ್ಷಣೆಯನ್ನು ಒದಗಿಸಲಾಗುವುದು. ದುಷ್ಟ ಶಕ್ತಿಗಳು ಯಾವಾಗಲೂ ಹೀಗೆ ಬೆದರಿಕೆ ಒಡ್ಡುವ ಕೆಲಸವನ್ನೇ ಮಾಡುವುದು. ಈ ಬೆದರಿಕೆಗಳಿಗೆ ಪ್ರಿಯಾಂಕ್ ಸೇರಿದಂತೆ ಯಾರೂ ಹೆದರುವುದಿಲ್ಲ,” ಎಂದರು.
ಬಿಜೆಪಿಯವರು ಹಿಂದೊಮ್ಮೆ “ತಾಕತ್ತಿದ್ದರೆ ಬನ್ನಿ” ಎಂದು ಸವಾಲು ಹಾಕಿ ಕೊನೆಗೆ ಚುನಾವಣೆಯಲ್ಲಿ ಸೋತು ಹೋದದ್ದನ್ನು ನೆನಪಿಸಿದ ಸಿಎಂ, ಈ ರೀತಿಯ ಸವಾಲು ಹಾಕುವ ಮುನ್ನ ಬಿಜೆಪಿ ಹಿನ್ನೋಟ ನೋಡಿದರೆ ಉತ್ತಮ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ
ಕಳೆದ ನಾಲ್ಕೈದು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಮಾತನಾಡಿದ ಸಿಎಂ, “ಜಿಪಂ, ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆ, ಮೀಸಲಾತಿ ನಿಗದಿ ವಿಚಾರ ಕೋರ್ಟ್‌ನಲ್ಲಿದೆ. ಕೋರ್ಟ್ ನಿರ್ದೇಶನ ನೀಡಿದ ತಕ್ಷಣ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ. ಗ್ರೇಟರ್ ಬೆಂಗಳೂರು ಮಹಾ ನಗರ ಪಾಲಿಕೆಗಳೂ ಸೇರಿ ಬಾಕಿ ಉಳಿದಿರುವ ಎಲ್ಲ ಚುನಾವಣೆಗಳನ್ನೂ ಹಂತ ಹಂತವಾಗಿ ಮಾಡುತ್ತೇವೆ. ಪ್ರಜಾಪ್ರಭುತ್ವ ಗಟ್ಟಿಯಾಗುವುದು ಚುನಾವಣೆಗಳಿಂದ,” ಎಂದು ಸ್ಪಷ್ಟಪಡಿಸಿದರು.
ಸಂಪುಟ ಬದಲಾವಣೆ ಸುಳಿವು
ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಾಚನೆ ಬಗ್ಗೆ ಕೇಳಿದ ಪ್ರಶ್ನೆಗೆ, “ನಮ್ಮ ಹೈ ಕಮಾಂಡ್ ಬಿಹಾರ ಚುನಾವಣೆಯತ್ತ ಗಮನ ಹರಿಸಿದೆ. ಬಿಹಾರ ಚುನಾವಣೆ ಮುಗಿಯಲಿ, ಆಮೇಲೆ ನೋಡೋಣ. ಹೈಕಮಾಂಡ್ ಹೇಳಿದಂತೆ ಮಾಡೋಣ,” ಎನ್ನುವ ಮೂಲಕ ಸಂಪುಟ ಬದಲಾವಣೆಯ ಸುಳಿವು ನೀಡಿದರು. ಡಿನ್ನರ್ ಕೂಟ ಆಯೋಜನೆಗೂ ನಾಯಕತ್ವ ಬದಲಾವಣೆಗೂ ಸಂಬಂಧವಿಲ್ಲ, ಎಲ್ಲವೂ ಮಾಧ್ಯಮಗಳ ಸೃಷ್ಟಿ ಎಂದು ಅವರು ವ್ಯಂಗ್ಯವಾಡಿದರು.
ಪಕ್ಷಪಾತದ ಅನುದಾನ ಹಂಚಿಕೆ ಕುರಿತು ಜೆಡಿಎಸ್ ಶಾಸಕರು ಹೈಕೋರ್ಟ್ ಮೊರೆ ಹೋಗಿರುವ ಬಗ್ಗೆ ಗರಂ ಆದ ಸಿಎಂ, “ಕೋರ್ಟ್‌ನಲ್ಲೇ ತೀರ್ಮಾನ ಆಗಲಿ ಬಿಡಿ. ವಿಪಕ್ಷಗಳು ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಶಾಸಕರಿಗೆ ಎಷ್ಟು ಅನುದಾನ ನೀಡಿದ್ದರು? ಎಷ್ಟು ಕೊಡಬೇಕೋ ಅಷ್ಟು ಕೊಟ್ಟಿದ್ದೇವೆ,” ಎಂದು ಟೀಕಿಸಿದರು.