
ಮೈಸೂರು: ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಅಧಿಕಾರ ಹಂಚಿಕೆಯ ಊಹಾಪೋಹಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. “ನಮ್ಮ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ, ಯಾರೋ ಶಾಸಕರು ಹೇಳಿದ್ದಕ್ಕೆಲ್ಲ ಕಿವಿಗೊಡಬೇಡಿ” ಎಂದು ಹೇಳುವ ಮೂಲಕ ಸಿಎಂ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ತಮಿಳುನಾಡು ಪ್ರವಾಸಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿ ಅವರನ್ನು ಮೈಸೂರು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರ ಬದಲಾವಣೆಯ ಚರ್ಚೆಗಳು ಕೇವಲ ಮಾಧ್ಯಮಗಳಲ್ಲಿ ಮಾತ್ರ ಇವೆ ಹೊರತು ಪಕ್ಷದ ಒಳಗಿಲ್ಲ ಎಂದರು. “ನಾನು ಮತ್ತು ಡಿ.ಕೆ. ಶಿವಕುಮಾರ್ ಸ್ಪಷ್ಟವಾಗಿದ್ದೇವೆ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವಿಬ್ಬರೂ ಬದ್ಧರಾಗಿದ್ದೇವೆ. ಸದ್ಯಕ್ಕೆ ನಾನು ದೆಹಲಿಗೆ ಹೋಗುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಸರ್ಕಾರದ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಸಿಎಂ, ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ರಾಜ್ಯ ಬಜೆಟ್ ಮಂಡಿಸುವುದಾಗಿ ತಿಳಿಸಿದರು. ಬಜೆಟ್‌ಗೂ ಮುನ್ನ ಅಂದರೆ ಫೆಬ್ರವರಿ 13 ರಂದು ಹಾವೇರಿಯಲ್ಲಿ ಸರ್ಕಾರದ ‘ಸಾಧನಾ ಸಮಾವೇಶ’ ಹಮ್ಮಿಕೊಳ್ಳಲಾಗುವುದು ಎಂದು ಘೋಷಿಸಿದರು. ಕುಮಾರಸ್ವಾಮಿ ಅವರ ಸಕ್ರಿಯ ರಾಜಕಾರಣದ ಕುರಿತು ಪ್ರತಿಕ್ರಿಯಿಸಿದ ಅವರು, “ಅವರ ಆರೋಗ್ಯ ಸುಧಾರಿಸುತ್ತಿರುವುದು ಸಂತೋಷದ ವಿಚಾರ. ಆದರೆ ಕೇವಲ ಹಾವಭಾವ ನೋಡಿ ರಾಜಕೀಯ ತೀರ್ಮಾನ ಮಾಡಲು ಸಾಧ್ಯವಿಲ್ಲ” ಎಂದು ಟಾಂಗ್ ನೀಡಿದರು.




































