
ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಕುರ್ಚಿಯ ಸುತ್ತಲಿನ ಚರ್ಚೆಗಳು ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮತ್ತೊಮ್ಮೆ ಭುಗಿಲೆದ್ದವು. ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ, ಸಿಎಂ ಗಾದಿಯ ಸುತ್ತಲಿನ ಗದ್ದಲಕ್ಕೆ ತಿರುಗಿ ಸದನದಲ್ಲಿ ತೀವ್ರ ಕುತೂಹಲ ಕೆರಳಿಸಿತು.
ಅನುದಾನ ಕಡಿತದ ಕುರಿತು ಶಾಸಕರ ಆಕ್ರೋಶ
ಸದನದಲ್ಲಿ ಅನುದಾನ ಹಂಚಿಕೆಯ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ಅವರು ಸ್ವತಃ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಮಾತನಾಡಿದ ಅವರು, “ಮಧುಗಿರಿಗೆ ₹100 ಕೋಟಿ ಅನುದಾನ ಕೊಡಲಾಗುತ್ತದೆ. ಆದರೆ, ನನ್ನ ಕ್ಷೇತ್ರಕ್ಕೆ ಏಕೆ ಅನುದಾನ ಸಿಗುತ್ತಿಲ್ಲ? ನನ್ನ ಕ್ಷೇತ್ರಕ್ಕೆ ಹಿಂದೆ ಮಂಜೂರಾಗಿದ್ದ ₹1000 ಕೋಟಿ ಮೊತ್ತದ ಅನುದಾನವನ್ನು ತಡೆ ಹಿಡಿಯಲಾಗಿದೆ,” ಎಂದು ಆಕ್ರೋಶದಿಂದ ಪ್ರಶ್ನಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ರಂಗನಾಥ್ ಅವರ ಈ ಪ್ರಶ್ನೆಯು, ಕಾಂಗ್ರೆಸ್‌ನ ಆಂತರಿಕ ‘ಸಿಎಂ ಕುರ್ಚಿ’ ಕಾದಾಟದ ವಿಚಾರವನ್ನು ಸದನದಲ್ಲಿ ಮತ್ತೆ ಮುನ್ನಲೆಗೆ ತಂದಿತು.
‘ಐದು ವರ್ಷಗಳೂ ನಾನೇ ಸಿಎಂ’: ಸಿದ್ದರಾಮಯ್ಯನವರಿಂದ ಸ್ಪಷ್ಟನೆ
ಶಾಸಕ ರಂಗನಾಥ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಅನುದಾನ ಹಂಚಿಕೆಯಲ್ಲಿ ವ್ಯತ್ಯಾಸಗಳಾಗಿದ್ದರೆ ಅದನ್ನು ಪರಿಶೀಲಿಸಲಾಗುವುದು. ಯಾವುದೇ ಶಾಸಕರ ಕ್ಷೇತ್ರಕ್ಕೆ ಅನುದಾನ ಕಡಿತಗೊಳಿಸಲಾಗಿಲ್ಲ,” ಎಂದು ಸ್ಪಷ್ಟೀಕರಣ ನೀಡಿದರು.
ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮಧ್ಯಪ್ರವೇಶಿಸಿ, “ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟ ಕಾರಣದಿಂದ ರಂಗನಾಥ್ ಅವರಿಗೆ ಅನುದಾನ ವಿಚಾರದಲ್ಲಿ ಅಸಮಾಧಾನ ಉಂಟಾಗಿದೆ,” ಎಂದು ವ್ಯಂಗ್ಯವಾಡಿದರು.
ಇದಕ್ಕೆ ತೀಕ್ಷ್ಣ ಕೌಂಟರ್ ನೀಡಿದ ಸಿಎಂ ಸಿದ್ದರಾಮಯ್ಯ, “ಜನರು ಕಾಂಗ್ರೆಸ್‌ನ 140 ಶಾಸಕರನ್ನು ಆಶೀರ್ವದಿಸಿದ್ದಾರೆ. ಹಾಗಾಗಿ, ನಾವು ಐದು ವರ್ಷಗಳೂ ಅಧಿಕಾರದಲ್ಲಿ ಇರುತ್ತೇವೆ. 2028ರ ಚುನಾವಣೆಯಲ್ಲಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ನಿಮಗೆ (ವಿಪಕ್ಷಗಳಿಗೆ) ಮುಂದೆಯೂ ಜನ ಅವಕಾಶ ನೀಡುವುದಿಲ್ಲ,” ಎಂದು ತಿರುಗೇಟು ನೀಡಿದರು. ಸಿಎಂ ಮಾತಿಗೆ ಬೆಂಬಲ ವ್ಯಕ್ತಪಡಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, “140 ಶಾಸಕರ ಬೆಂಬಲ ಇರುವುದರಿಂದಲೇ ಐದು ವರ್ಷ ನಾನೇ ಇರುತ್ತೇನೆ ಎಂದು ಸಿಎಂ ಹೇಳುತ್ತಿದ್ದಾರೆ,” ಎಂದರು.
‘ಉಪ್ಪು ಹಾಕ್ಬೇಡಿ’ ವಾಕ್ಸಮರ
ಶಾಸಕ ರಂಗನಾಥ್ ಅವರ ಆಕ್ರೋಶದ ಹೇಳಿಕೆ ಬಗ್ಗೆ ಆರ್. ಅಶೋಕ್ ಮತ್ತೊಮ್ಮೆ ಪ್ರಸ್ತಾಪಿಸಿದಾಗ, ಸಿಎಂ ಸಿದ್ದರಾಮಯ್ಯ, “ಅವರಿಗೆ ನೋವಾಗಿದ್ದರೆ ಉರಿಯೋದಕ್ಕೆ ನೀನು ಉಪ್ಪು ಹಾಕಬೇಡ,” ಎಂದರು. ಇದಕ್ಕೆ ಅಶೋಕ್, “ಹಾಗಿದ್ದರೆ, ಅಲ್ಲಿ ನಿಜವಾಗಿಯೂ ಉರಿಯುತ್ತಿದೆಯೇ?” ಎಂದು ಲೇವಡಿ ಮಾಡಿದರು.
“ಅದು ಗಾದೆ ಮಾತು ಅಷ್ಟೇ ಕಣಯ್ಯ,” ಎಂದು ಸಿಎಂ ಸಮಾಧಾನದಿಂದ ಉತ್ತರಿಸಿದರು. ತಕ್ಷಣ ಎದ್ದು ನಿಂತ ಸುನಿಲ್ ಕುಮಾರ್, “ಅದು ಗಾದೆ ಮಾತೋ… ಮನಸ್ಸಿನಲ್ಲಿದ್ದ ಮಾತೋ?” ಎಂದು ಪ್ರಶ್ನಿಸಿದರು. ಆಗ ಸಿಎಂ ಮತ್ತಷ್ಟು ಗಟ್ಟಿ ಧ್ವನಿಯಲ್ಲಿ, “ನೀವು ಎಷ್ಟೇ ಉಪ್ಪನ್ನು ಹಾಕಿದರೂ, ನಮ್ಮ ಶಾಸಕರು ಐದು ವರ್ಷ ಪೂರ್ಣಗೊಳ್ಳುವಂತೆ ಜನ ಆಶೀರ್ವದಿಸಿದ್ದಾರೆ. ಐದು ವರ್ಷಗಳ ಕಾಲ ನಾವೇ ಇರುತ್ತೇವೆ,” ಎಂದು ಪುನರುಚ್ಚರಿಸಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, “ಎಷ್ಟು ಸೀಟು ಗೆಲ್ಲುವುದು ಮುಖ್ಯವಲ್ಲ, ಐದು ವರ್ಷ ಸಿಎಂ ಆಗಿರುವುದು ಮುಖ್ಯ,” ಎಂದು ಕೆಣಕಿದರು. ಇದಕ್ಕೆ ಯಾವುದೇ ಅಳುಕಿಲ್ಲದೆ ಸ್ಪಷ್ಟ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, “ನಾನೇ ಮುಖ್ಯಮಂತ್ರಿ. ಈಗಲೂ ನಾನೇ ಮುಖ್ಯಮಂತ್ರಿ,” ಎಂದು ಸದನದಲ್ಲಿ ದಿಟ್ಟ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಸುನಿಲ್ ಕುಮಾರ್ ಮತ್ತೊಮ್ಮೆ ಎದ್ದು ನಿಂತು, “ಹಾಗಿದ್ದರೆ, ಮುಂದೆಯೂ ನಾನೇ ಮುಖ್ಯಮಂತ್ರಿ ಎಂದು ಹೇಳಿ,” ಎಂದು ಮತ್ತೆ ಲೇವಡಿ ಮಾಡಿದರು.



































