
ಬೆಂಗಳೂರು : ರಾಜ್ಯದ ಮುಖ್ಯಮಂತ್ರಿಯರಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಇಮೇಲ್ ಮೂಲಕ ಗಂಭೀರ ಜೀವ ಬೆದರಿಕೆ ಬಂದಿರುವ ಘಟನೆ ಭಾರಿ ಚರ್ಚೆಗೆ ಕಾರಣವಾಗಿದೆ. ‘ಸಿಂಧಾ ರಜಪೂತ್’ ಎಂಬ ಹೆಸರಿನ ಇಮೇಲ್ ವಿಳಾಸದಿಂದ ಈ ಸಂದೇಶ ಬಂದಿದ್ದು, ಇಬ್ಬರನ್ನು ಹತ್ಯೆಗೈದು ಟ್ರಾಲಿ ಬ್ಯಾಗ್‌ಗಿನಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಡುವುದಾಗಿ ಹೇಳಲಾಗಿದೆ.
ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದ್ದು, ಸೈಬರ್ ಕ್ರೈಂ ಪೊಲೀಸರು ಪ್ರಕರಣದ ತೀವ್ರ ತನಿಖೆಗೆ ಮುಂದಾಗಿದ್ದಾರೆ. ಮೂಲದ ಶೋಧ ಮತ್ತು ಇಮೇಲ್ ಕಳುಹಿಸಿರುವ ವ್ಯಕ್ತಿಯ ಹಿನ್ನಲೆಯಲ್ಲಿ ತನಿಖೆ ನಡೆಯುತ್ತಿದೆ.
ಇದೇ ಇಮೇಲ್ ಪ್ರತಿಯನ್ನು ಗೃಹ ಸಚಿವರು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ಕಳುಹಿಸಲಾಗಿದೆ. ಇನ್ನು ಅದೇ ಸಂದೇಶದಲ್ಲಿ ರಾಮಪುರದ ಪ್ರಭಾಕರ್ ಎಂಬ ವ್ಯಕ್ತಿಗೆ ಒಂದು ಕೋಟಿ ರೂ. ಸಾಲ ಕೊಟ್ಟಿದ್ದು, ತಕ್ಷಣದಲ್ಲಿ ಹಿಂದಿರುಗಿಸದಿದ್ದರೆ ಆತನನ್ನು ಸಹ ಹತ್ಯೆಗೊಳಿಸುತ್ತೇನೆ ಎಂಬ ಬೆದರಿಕೆಯೂ ಇದೆ. ಪ್ರಭಾಕರ್‌ನ ಕುಟುಂಬದ ವಿವರಗಳು ಹಾಗೂ ಅವನ ಮಗನ ಮದುವೆ ಕುರಿತ ಮಾಹಿತಿಯೂ ಇದರಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರು ಈ ಇಮೇಲ್‌ನ ಹಿಂದಿರುವ ವ್ಯಕ್ತಿ ಅಥವಾ ಸಂಘಟನೆ ಬಗ್ಗೆ ಸೂಕ್ಷ್ಮ ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ಇದು ಕಿಡಿಗೇಡಿಗಳ ಕೃತ್ಯವೆಂದು ಶಂಕಿಸಲಾಗಿದೆ. ಸರ್ಕಾರದ ಹಿರಿಯ ನಾಯಕರ ಭದ್ರತೆಯ ಬಗ್ಗೆ ಇದೀಗ ಹೊಸ ಚರ್ಚೆ ನಡೆಯುತ್ತಿದೆ.