
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೇ 23, 2025ರಂದು ಎರಡು ವರ್ಷಗಳನ್ನು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಎರಡು ವರ್ಷದ ಸಂಭ್ರಮಾಚರಣೆ ಮಾಡಲು ಉತ್ಸುಕರಾ ಗಿದ್ದು, ನವೆಂಬರ್‌ನಲ್ಲಿ ಸಿಎಂ ಹುದ್ದೆಗೆ ಹಕ್ಕು ಮಂಡಿಸಲು ಅವರು ಸಜ್ಜಾಗಿದ್ದಾರೆ.
ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನರಚನೆ ಮಾಡುವ ಯೋಜನೆಯಲ್ಲಿ ತೊಡಗಿದ್ದಾರೆ. ಈ ಮೂಲಕ ಸಿಎಂ ಸ್ಥಾನವನ್ನು ಉಳಿಸಿಕೊಳ್ಳಲು ಅವರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಪುಟ ಪುನರಚನೆ ಮೂಲಕ ಪ್ಲಾನ್?
ಕಾಂಗ್ರೆಸ್‌ನ ಹಿರಿಯ ಶಾಸಕರ ಪ್ರಕಾರ, ಅಕ್ಟೋಬರ್ 2025ಕ್ಕೆ ಸಿದ್ದರಾಮಯ್ಯ ಸಿಎಂ ಆಗಿ ಎರಡೂವರೆ ವರ್ಷಗಳನ್ನು ಪೂರೈಸುವ ಮೊದಲು ಯಾವುದೇ ಬದಲಾವಣೆ ಸಂಭವಿಸಬಹುದು. ಹೀಗಾಗಿ ಸಂಪುಟ ಪುನರಚನೆ ತಂತ್ರದೊಂದಿಗೆ ಸಿಎಂ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಶಿವಕುಮಾರ್ ಅವರ ಸ್ಪಷ್ಟನೆ
ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಹಾಗೂ ಡಿಸಿಎಂ ಆಗಿ ಮುಂದುವರಿಯಲು ಸಿದ್ಧರಿದ್ದಾರೆ. ಜಲಸಂಪತ್ತು ಮತ್ತು ಬೆಂಗಳೂರು ಅಭಿವೃದ್ಧಿ ಸೇರಿದಂತೆ ಪ್ರಮುಖ ಖಾತೆಗಳು ಅವರ ಪಕ್ಕದಲ್ಲಿಯೇ ಉಳಿದಿವೆ. ಇದಲ್ಲದೆ, ಸಂಪುಟದಿಂದ 15 ಸಚಿವರನ್ನು ಕೈಬಿಡಲು ಅವರು ಸಿದ್ಧರಾಗಿದ್ದಾರೆ. ಈ ಪೈಕಿ ಅವರ ಕೆಲ ಬೆಂಬಲಿಗರೂ ಇದ್ದಾರೆ ಎಂಬ ಮಾಹಿತಿಯಿದೆ.
ಶಾಸಕರ ಅಸಮಾಧಾನಕ್ಕೆ ಸ್ಪಂದನೆ
ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಕೆಲ ಶಾಸಕರು ತಮ್ಮ ಪ್ರಸ್ತಾವನೆಗಳಿಗೆ ಸಚಿವರು ಸ್ಪಂದಿಸುತ್ತಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನು ನೆಪ ಮಾಡಿಕೊಂಡು, ಸಿಎಂ ಸಂಪುಟ ಪುನರಚನೆಗೆ ಮುಂದಾಗಿದ್ದಾರೆ ಎಂಬ ವರದಿಯಿದೆ.
ಸಚಿವರ ನಡುವೆ ಗಲಾಟೆ
ರಾಯಚೂರು ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪುಕಾಶ್ ಪಾಟೀಲ್ ಮತ್ತು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು ಎಂಬ ವರದಿ ಬಂದಿದೆ.