
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದ ಸಂಸ್ಕೃತ ವೇದಾಧ್ಯಯನ ವಸತಿ ಶಾಲೆಯಲ್ಲಿ ನಡೆದ ಅಮಾನವೀಯ ಘಟನೆಯೊಂದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ವೇದಾಧ್ಯಯನ ಶಾಲೆಯ ಮುಖ್ಯ ಶಿಕ್ಷಕ ವೀರೇಶ್ ಹಿರೇಮಠ್ ಅವರು 9 ವರ್ಷದ ವಿದ್ಯಾರ್ಥಿ ತರುಣ್ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದು, ಆತನಿಗೆ ಕಾಲಿನಿಂದ ಒದ್ದು ವಿಕೃತಿ ಮೆರೆದಿದ್ದಾರೆ.
ವಿದ್ಯಾರ್ಥಿ ತರುಣ್ ತನ್ನ ಅಜ್ಜಿಗೆ ಫೋನ್ ಮಾಡಿದುದನ್ನು ಪ್ರಶ್ನಿಸಿ ಶಿಕ್ಷಕ ಈ ಕ್ರೌರ್ಯ ಮೆರೆದಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತರುಣ್ ಉತ್ತರ ಕರ್ನಾಟಕ ಮೂಲದ ವಿದ್ಯಾರ್ಥಿಯಾಗಿದ್ದು, ದೇಗುಲಕ್ಕೆ ಸೇರಿದ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.
ಕ್ಷುಲ್ಲಕ ಕಾರಣಕ್ಕೆ ಹಲ್ಲೆ:
ಅಜ್ಜಿಗೆ ಬೇರೆ ನಂಬರಿನಿಂದ ಕರೆ ಮಾಡಿದರೆ ಬಿಡುವುದಿಲ್ಲ ಎಂದು ಶಿಕ್ಷಕ ವೀರೇಶ್ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ. ವಿಡಿಯೋ ವೈರಲ್ ಆದ ಬಳಿಕ ಶಿಕ್ಷಕ ವೀರೇಶ್ ಹಿರೇಮಠ್ ನಾಪತ್ತೆಯಾಗಿದ್ದು, ಸಾರ್ವಜನಿಕರು ಹಾಗೂ ಪೋಷಕರು ಈ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ಕುರಿತು ಗುರು ತಿಪ್ಪೇಸ್ವಾಮಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಪ್ಪ ಅವರು ನಾಯಕನಹಟ್ಟಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾಗಿರುವ ಶಿಕ್ಷಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.













