
ಬೆಂಗಳೂರು: ಐಪಿಎಲ್ ಪ್ರಿಯರಿಗೆ ಹಾಗೂ ಆರ್‌ಸಿಬಿ ಅಭಿಮಾನಿಗಳಿಗೆ ಬಹುದಿನಗಳ ಬಳಿಕ ಸಂಭ್ರಮದ ಸುದ್ದಿಯೊಂದು ಸಿಕ್ಕಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಕರ್ನಾಟಕ ಸರ್ಕಾರ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದೆ. 2025 ರ ಜೂನ್ 4 ರಂದು ನಡೆದಿದ್ದ ದುರದೃಷ್ಟಕರ ಕಾಲ್ತುಳಿತ ಘಟನೆಯ ನಂತರ, ಭದ್ರತಾ ಕಾರಣಗಳಿಂದಾಗಿ ಇಲ್ಲಿ ಪಂದ್ಯಗಳ ಆಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಸುಮಾರು 9 ತಿಂಗಳ ನಂತರ ಮತ್ತೆ ಈ ಮೈದಾನದಲ್ಲಿ ಕ್ರಿಕೆಟ್ ಹಬ್ಬ ಶುರುವಾಗಲಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ನೇತೃತ್ವದ ಸಮಿತಿಯು ಕ್ರೀಡಾಂಗಣದ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿದ ಬೆನ್ನಲ್ಲೇ ಈ ಅನುಮತಿ ನೀಡಲಾಗಿದೆ. ನ್ಯಾ. ಮೈಕಲ್ ಡಿ ಕುನ್ಹಾ ಅವರ ಶಿಫಾರಸುಗಳನ್ನು ಪಾಲಿಸುವ ಭರವಸೆಯನ್ನು ಕೆಎಸ್‌ಸಿಎ (KSCA) ನೀಡಿದ್ದು, ಈ ಬಾರಿ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಪಂದ್ಯಗಳು ನಡೆಯಲಿವೆ.
ಪಂದ್ಯಗಳ ವೇಳೆ ಪ್ರೇಕ್ಷಕರ ಸಂಖ್ಯೆಯನ್ನು 35,000 ಕ್ಕೆ ಸೀಮಿತಗೊಳಿಸಲಾಗಿದೆ. ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಓಡಾಟಕ್ಕೆ ಮುಕ್ತ ಅವಕಾಶ, ಪ್ರವೇಶ ದ್ವಾರಗಳ ವಿಸ್ತರಣೆ ಮತ್ತು ಸಮರ್ಪಕ ಪಾರ್ಕಿಂಗ್ ವ್ಯವಸ್ಥೆಗಳನ್ನು ಕಲ್ಪಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಯಮ ಉಲ್ಲಂಘನೆಯಾದರೆ ಪಂದ್ಯದ ಅನುಮತಿಯನ್ನು ರದ್ದುಗೊಳಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ. ಮಾರ್ಚ್ 26 ರಿಂದ ಐಪಿಎಲ್ ಆರಂಭವಾಗುವ ಸಾಧ್ಯತೆಯಿದ್ದು, ಫೆಬ್ರವರಿ ಅಂತ್ಯದೊಳಗೆ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ.



































